ಹಾಸನ ಜಿಲ್ಲೆಯಲ್ಲಿ ಕಳೆದ 42 ದಿನಗಳಲ್ಲಿ 26 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದು, ತನಿಖೆಗಿಳಿದ್ದ ತಜ್ಞರ ಸಮಿತಿಯೇ ಶಾಕ್ ಆಗಿದೆ. ಇತ್ತೀಚೆಗೆ ಹೃದಯಾಘಾತ ಸಾವು ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ ಏನೆಂಬುದು ಕೊನೆಗೂ ಬಯಲಾಗಿದೆ.
ಹೃದಯಾಘಾತ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನ ಜಯದೇವ ಆಸ್ಪತ್ರೆ ಮುಖ್ಯಸ್ಥರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. 10 ದಿನದಲ್ಲೇ ವರದಿ ನೀಡುವಂತೆ 12 ಮಂದಿ ತಜ್ಞರ ಸಮಿತಿಗೆ ಸರ್ಕಾರ ಸೂಚಿಸಿತ್ತು. ಇದೀಗ ಪ್ರಾಥಮಿಕ ವರದಿಯನ್ನು ತಜ್ಞರು ಸಿದ್ಧಪಡಿಸಿದ್ದಾರೆ.
ಬೊಜ್ಜು, ಕೆಂಪು ಮಾಂಸ ಸೇವನೆ, ಧೂಮಪಾನ, ಮದ್ಯಪಾನ, ಫಾಸ್ಟ್ ಫುಡ್ ಸೇವನೆಯಿಂದಲೇ ಹೆಚ್ಚು ಹೃದಯಾಘಾತಗಳು ಸಂಭವಿಸುತ್ತಿವೆ. ಅತಿಯಾದ ರೆಡ್ ಮೀಟ್ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಮತ್ತು ಟೈಪ್ 2 ಮಧುಮೇಹ, ಹೃದಯಾಘಾತ ಸಮಸ್ಯೆಗಳೇ ಹೆಚ್ಚು ಅಂತಾ ವರದಿಯಲ್ಲಿ ಉಲ್ಲೇಖಿಸಿದೆ.
ಸರ್ಕಾರಕ್ಕೆ ವರದಿ ಸಲ್ಲಿಸಲು ಇನ್ನೂ 1 ವಾರ ಸಮಯವಿದ್ದು, ಅಷ್ಟರಲ್ಲಿ ಆಳ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ನಿರ್ಧರಿಸಿದೆ. ಇನ್ನು ರಾಜ್ಯ ಸರ್ಕಾರ ಹೃದಯಾಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಟೆಮಿ ಯೋಜನೆ ವಿಸ್ತರಣೆಗೆ ಮುಂದಾಗಿದೆ.
ಸದ್ಯ, ರಾಜ್ಯದ 86 ತಾಲೂಕುಗಳಲ್ಲಿ ಮಾತ್ರ ಇರುವ ಸ್ಟೆಮಿ ಯೋಜನೆಯನ್ನು, ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲು ನಿರ್ಧರಿಸಿದೆ. ಜೊತೆಗೆ ಹಾರ್ಟ್ ಅಟ್ಯಾಕ್ ವೇಳೆ ರೋಗಿಯ ಎದೆಯನ್ನು ಒತ್ತಿ ಹೃದಯ ಬಡಿತ ಮರುಚಾಲನೆಗೊಳಿಸುವ ಪ್ರಾಥಮಿಕ ಚಿಕಿತ್ಸಾ ಕ್ರಮ ಅಂದರೆ ಸಿಪಿಆರ್ ಬಗ್ಗೆ ತರಬೇತಿ ನೀಡಲು ಕ್ರಮ ಕೈಗೊಂಡಿದೆ.