ಡಾ.ರಾಜ್ ಕುಮಾರ್ ಅವರ 38 ವರ್ಷಗಳ ಆಸೆ ಇಂದು ನೆರವೇರಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಂದಿ ಬೆಟ್ಟದ ಗಿರಿಧಾಮದ ಮಧ್ಯೆ ಅಣ್ಣಾವ್ರ ಕನಸನ್ನು ಕೊನೆಗೂ ನನಸು ಮಾಡಿದೆ. ಇಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ 2 ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
1987ರ ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಗೆ ಅಣ್ಣಾವ್ರು ಭೇಟಿ ನೀಡಿದ್ರು. ಬಾಲಕಿಯರ ಸರ್ಕಾರಿ ಶಾಲೆ ಆವರಣದಲ್ಲಿ, ಕನ್ನಡ ಕಲಾ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಆ ವೇಳೆ ಬಾಗೇಪಲ್ಲಿ ಹೆಸರನ್ನು ಬದಲಿಸುವ ಬಗ್ಗೆ ಅಂದೇ ಮಾತನಾಡಿದ್ದರು. ಅಣ್ಣಾವ್ರ ಆಸೆಯನ್ನ ಇಂದು ಸಿಎಂ ಸಿದ್ದರಾಮಯ್ಯ ಸರ್ಕಾರ ಈಡೇರಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಅಂತಾ ಮರುನಾಮಕರಣ ಮಾಡಲಾಗಿದೆ. ಹೆಸರು ಬದಲಾವಣೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ, ತೆಲುಗು ಭಾಷೆಯ ಪ್ರಭಾವ ಹೊಂದಿದೆ. ಹಲವು ದಶಕಗಳಿಂದಲೂ ಹೆಸರು ಬದಲಾವಣೆಗೆ ಹೋರಾಟಗಳು ನಡೆದಿದ್ದವು. ಭಾಗ್ಯನಗರ ಹೋರಾಟ ಸಮಿತಿಗಳೂ ಅಸ್ತಿತ್ವಕ್ಕೆ ಬಂದಿದ್ದವು. ಈಗ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ.
ಕೆಲ ದಿನಗಳ ಹಿಂದೆ ರಾಮನಗರವನ್ನು ಬೆಂಗಳೂರು ದಕ್ಷಿಣ ಅಂತಾ ಮರುನಾಮಕರಣ ಮಾಡಲಾಗಿತ್ತು. ಈ ಬೆನ್ನಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಉತ್ತರ ಜಿಲ್ಲೆ ಅಂತಾ ಮರುನಾಮಕರಣ ಮಾಡಲಾಗಿದೆ. 1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಬೆಂಗಳೂರು ಗ್ರಾಮಾಂತರ ಮಾಡಲಾಗಿತ್ತು. ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಉತ್ತರಕ್ಕೆ ಸೇರಿಕೊಳ್ಳಲಿವೆ.