Friday, July 4, 2025

Latest Posts

Dharwad News: ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸಿಎಂಗೆ ಬರೆದ ಪತ್ರದಲ್ಲಿ ಏನಿತ್ತು..?

- Advertisement -

Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ ಭರಮನಿ ಇದೀಗ ಸ್ವಯಂ ನಿವೃತ್ತಿಗೆ (VRS) ಮನವಿ ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು, ಇಲಾಖೆ ಜತೆ ತಾವು ಹೊಂದಿದ್ದ ಬಾಂಧವ್ಯದ ಬಗ್ಗೆ ಭಾವುಕರಾಗಿ ಉಲ್ಲೇಖಸಿದ್ದಾರೆ.

ನಾರಾಯಣ ಭರಮನಿ ಪತ್ರದಲ್ಲೇನಿದೆ?
‘‘ಮಾನ್ಯ ಮುಖ್ಯಮಂತ್ರಿಗಳಿಂದಾದ ಅವಮಾನದಿಂದ ಮನನೊಂದು ಸ್ವಯಂ ನಿವೃತ್ತಿ ಸಲ್ಲಿಸಲು ಮುಂದಾಗಿದ್ದೇನೆ. ನಾನು, ಎನ್. ವಿ. ಬರಮನಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಧಾರವಾಡ. 1994 ನೇ ಸಾಲಿನಲ್ಲಿ ಪಿ.ಎಸ್.ಐ ಆಗಿ ನೇಮಕಗೊಂಡು ಕಳೆದ 31 ವರ್ಷಗಳಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಪಿಎಸ್​​ಐ ಯಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರೆಗೆ ವಿವಿಧ ಹುದ್ದೆಗಳಲ್ಲಿ ಕಾನೂನು ಬದ್ಧ ಕಾರ್ಯನಿರ್ವಹಿಸುತ್ತ ಬಂದಿರುತ್ತೇನೆ.

ದಿನಾಂಕ : 28/04/2025 ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಶ್ರೀ ಸಿದ್ದರಾಮಯ್ಯ. ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ ರವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯ ಬಂದೋಬಸ್ತ್ ಕರ್ತವ್ಯಕ್ಕೆ ಮೇಲಾಧಿಕಾರಿಗಳು ನನ್ನನ್ನು ನಿಯೋಜಿಸಿ ವೇದಿಕೆಯ ಉಸ್ತುವಾರಿ ವಹಿಸಿದರು’’ ಎಂದು ಪತ್ರದಲ್ಲಿ ಭರಮನಿ ಉಲ್ಲೇಖಿಸಿದ್ದಾರೆ.

ಮುಂದುವರಿದು, ‘‘ನೀಡಲಾದ ಜವಬ್ದಾರಿಯನ್ನು ಯಾವುದೇ ಲೋಪವಾಗದಂತೆ ನನ್ನ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದವನು. ವೇದಿಕೆಯ ಮೇಲೆ ರಾಜ್ಯ ಸರ್ಕಾರದ ಅನೇಕ ಮಂತ್ರಿಗಳು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಧುರೀಣರು ಜನರನ್ನುದ್ದೇಶಿಸಿ ಭಾಷಣ ಮಾಡಿದರು. ತದನಂತರ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಸಿದ್ದರಾಮಯ್ಯ ರವರು ಭಾಷಣ ಮಾಡಲು ಪ್ರಾರಂಭಿಸಿದರು.

ಭಾಷಣ ಮುಂದುವರೆಸಿದ ಸುಮಾರು 10 ನಿಮಿಷಗಳ ನಂತರ ಸಾರ್ವಜನಿಕರು/ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕುಳಿತು ಕೊಂಡಿದ್ದ ಸಭಾ ಸ್ಥಳದಲ್ಲಿ ಬೇರೊಬ್ಬ ಎಸ್.ಪಿ ಮಟ್ಟದ ಅಧಿಕಾರಿ ಉಸ್ತುವಾರಿಯಲ್ಲಿದ್ದು, ಆ ಸ್ಥಳದಲ್ಲಿ ಯಾರೋ ನಾಲೈದು ಮಹಿಳೆಯರು ಕಪ್ಪು ಬಾವುಟ ತೋರಿಸಿ ಘೋಷಣೆ ಕೂಗಿದಾಗ, ಭಾಷಣ ಮಾಡುತ್ತಾ ಇದ್ದ ಮಾನ್ಯ ಮುಖ್ಯಮಂತ್ರಿಗಳು ಭಾಷಣ ನಿಲ್ಲಿಸಿ ನನ್ನ ಕಡೆ ಕೈ ಮಾಡಿ ‘ಏಯ್ ಯಾವನೊ ಇಲ್ಲಿ ಎಸ್​​ಪಿ ಬಾರಯ್ಯ ಇಲ್ಲಿ’ ಎಂದು ಏರು ಧ್ವನಿಯಲ್ಲಿ ಅಬ್ಬರಿಸಿದಾಗ ಅಲ್ಲಿ ಸ್ಥಳೀಯ ಎಸ್​​​ಪಿಯಾಗಲಿ ಅಥವಾ ಡಿಸಿಪಿಯಾಗಲಿ ಇರದೇ ಇದ್ದುದ್ದರಿಂದ, ಅವರ ಕರೆಗೆ ಓಗೊಟ್ಟು ವೇದಿಕೆ ಮೇಲೆ ಹೋದೆನು. ಮತ್ತು ಮಾನ್ಯರಿಗೆ ಗೌರವಸೂಚಕವಾಗಿ ಅತೀ ವಿನಮ್ರತೆಯಿಂದ ವಂದಿಸಿ ನಿಂತುಕೊಂಡೆನು.

ತಕ್ಷಣ ಏನೂ ಮಾತನಾಡದೆ ಏಕಾ ಏಕಿ ಕೈ ಎತ್ತಿ ನನಗೆ ‘ಕಪಾಳ ಮೋಕ್ಷ’ ಮಾಡಲು ಬಂದರು. ಕೂಡಲೇ ನಾನು ಒಂದು ಹೆಜ್ಜೆ ಹಿಂದೆ ಸರಿದು ಸಾರ್ವಜನಿಕವಾಗಿ ಆಗಬಹುದಾಗಿದ್ದ ಕಪಾಳಮೋಕ್ಷದಿಂದ ತಪ್ಪಿಸಿಕೊಂಡನು. ನಾ ಮಾಡದ ತಪ್ಪಿಗೆ ಅವಮಾನಿತನಾಗಿದೆ. ಈ ಘಟನೆಯನ್ನು ನಿರಂತರವಾಗಿ ಟಿವಿ ದೃಶ್ಯ ಮಾಧ್ಯಮಗಳಲ್ಲಿ 2 ದಿನಗಳ ಕಾಲ ಬಿತ್ತರಿಸಿದ್ದನ್ನು ತಾವೂ ಕೂಡ ಗಮನಿಸಿರುತ್ತೀರಿ ಎಂದು ಭಾವಿಸಿದ್ದೇನೆ’’ ಎಂದು ಭರಮನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

- Advertisement -

Latest Posts

Don't Miss