ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಅವರು ಮದುವೆಯಾಗದೇ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾರೆ. ಭಾವನಾ 6 ತಿಂಗಳ ಗರ್ಭಿಣಿ ಆಗಿರುವ ವಿಚಾರ ನಿನ್ನೆಯಿಂದಲೂ ಗುಲ್ಲೆಬ್ಬಿಸಿದೆ. ಭಾವನಾ ಅವರು ಹೇಗೆ ಅಮ್ಮ ಆಗುತ್ತಿದ್ದಾರೆ. ಭಾವನಾ ಅವರು ಮದುವೆನೇ ಆಗಬಹುದಿತ್ತಲ್ಲಾ. ಹುಟ್ಟೋ ಮಕ್ಕಳು ಹೆಣ್ಣಾ? ಗಂಡಾ? ಆ ಮಕ್ಕಳು ನಮ್ಮ ಅಪ್ಪ ಯಾರು ಅಂತ ಕೇಳಿದ್ರೆ ಏನಂತಾ ಹೇಳುತ್ತಾರೆ. ಹೀಗೆ ಹಲವಾರು ಪ್ರಶ್ನೆಗಳು ನಟಿ ಭಾವನಾ ಅವರಿಗೂ ಎದುರಾಗಿದೆ. ತನ್ನ ನಿರ್ಧಾರವನ್ನು ಯಾವುದೇ ಅಳುಕು, ಮುಜುಗರವಿಲ್ಲದೇ ಭಾವನಾ ಸಮರ್ಥಿಸಿಕೊಂಡಿದ್ದಾರೆ. ಒಂದೊಂದು ಮಾತಿಗೆ ನೇರಾನೇರವಾಗೇ ತಿರುಗೇಟು ಕೊಟ್ಟಿದ್ದಾರೆ.
ಹೆಣ್ಣು ಯಾವಾಗಲೂ ಹೆಣ್ಣಾಗಿಯೇ ಇರುತ್ತಾಳೆ. ಗಂಡಸು ಬಂದ ಬಳಿಕ ಅವಳು ಹೆಣ್ಣಾಗೋದಿಲ್ಲ. ಮದುವೆ ಆಗಿಯೇ ಮಗು ಪಡೆಯಬೇಕು ಎಂಬುದು ಎಲ್ಲಿಯೂ ಇಲ್ಲ. ಮದುವೆ ಆಗದೆ ಮಗು ಪಡೆಯೋದು ತಪ್ಪಲ್ಲ ಎಂದು ನಟಿ ಭಾವನಾ ಹೇಳಿದ್ದಾರೆ.
ಹೆಣ್ಣಿಗೆ ಮಕ್ಕಳು ಪಡೆಯೋಕೆ ಮದುವೆ ಆಗಬೇಕು ಅನ್ನೋದು ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಜೀವನದಲ್ಲಿ ಸಂಗಾತಿ ಬೇಕು ನಿಜ. ಆದರೆ, ಮಕ್ಕಳು ಹೊಂದ ಬೇಕು ಎಂದು ವಿವಾಹ ಆಗಬಾರದು. ನನಗೆ ತಾಯ್ತನ ಅನುಭವಿಸುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಪ್ರಾಕೃತಿಕವಾಗಿ ಅದು ನನಗೆ ಸಿಕ್ಕಿದೆ. ಪ್ರತಿ ಪ್ರಾಣಿಯೂ ಕೂಡ ಮಗುವನ್ನು ಪಡೆಯುವ ಹಕ್ಕನ್ನು ಹೊಂದಿದೆ. ಹುಲಿ-ಸಿಂಹದ ಬಳಿ ಯಾರಾದ್ರೂ ಮದುವೆ ಆಗಿದೆಯಾ ಎಂದು ಕೇಳುತ್ತಾರಾ? ಹಸುಗಳಲ್ಲಿ ಐವಿಎಫ್ ಮೂಲಕ ಕರು ಮಾಡಿಸಲಾಗುತ್ತದೆ.
40ನೇ ವಯಸ್ಸಿಗೆ ಬಂದಿದ್ದೇನೆ ಎಂದರೆ ನನ್ನದೇ ಲೈಫ್ ಅಭ್ಯಾಸ ಆಗಿ ಬಿಟ್ಟಿರುತ್ತದೆ. ಈ ವೇಳೆ ಮತ್ತೊಬ್ಬರು ಜೀವನದಲ್ಲಿ ಬರೋದು ಎಂದರೆ ಬಲು ಕಷ್ಟ. ಅವರಿಗೂ ಅದು ಹಿಂಸೆ. ವಿವಾಹ ಆದ ಬಳಿಕ ಒಂದಷ್ಟು ಕಾಂಪ್ಲಿಕೇಷನ್ ಇರುತ್ತದೆ.
ನಟಿ ಭಾವನಾ ಅವರು ಬೆಂಗಳೂರಿನಲ್ಲೇ ಐವಿಎಫ್ ತಂತ್ರಜ್ಞಾನದ ಮೂಲಕ ಮಗು ಪಡೆಯುತ್ತಿದ್ದಾರೆ. ಇದನ್ನು ಜನರಿಂದ ಮುಚ್ಚಿಡುವಂತೆ ಕೆಲವರು ಹೇಳಿದ್ದರಂತೆ. ಆದರೆ, ನಾನು ಆಗು-ಹೋಗುಗಳ ಬಗ್ಗೆ ಅಪ್ಡೇಟ್ ನೀಡಲೇಬೇಕು. ಅಭಿಮಾನಿಗಳು ಪ್ರೀತಿ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳಬೇಕಿದೆ. ನಾನು ಮುಚ್ಚು-ಮರೆ ಮಾಡಬಹುದಿತ್ತು. ಹೆದರಿ ಬದುಕೋ ಅಗತ್ಯ ನನಗೆ ಇಲ್ಲ. ನಮ್ಮ ಸಮಾಜ ಶುರುವಾಗೋದು ಮನೆಯಿಂದ. ತಂದೆಯೇ ಇದಕ್ಕೆ ಒಪ್ಪಿಗೆ ಕೊಟ್ಟಿರುವಾಗ ಭಯ ಪಡೋದು ಏಕೆ ಎಂದು ಭಾವನಾ ಪ್ರಶ್ನಿಸಿದ್ದಾರೆ.