Sunday, July 6, 2025

Latest Posts

ಮತ್ತೆ ಒಂದಾದ ಉದ್ಧವ್, ರಾಜ್ ಠಾಕ್ರೆ ಪ್ಲ್ಯಾನ್ ಏನು?

- Advertisement -

ಸಹೋದರರು ಬೆಳೆಯುತ್ತಾ ದಾಯಾದಿಗಳಾಗುತ್ತಾರೆ. ದಾಯಾದಿ ಸಹೋದರರ ಮಧ್ಯೆ ದ್ವೇಷ ಹೊಸದೇನು ಅಲ್ಲ. ಆದರೆ ಮಹಾರಾಷ್ಟ್ರದಲ್ಲಿ 20 ವರ್ಷಗಳ ಬಳಿಕ ಠಾಕ್ರೆ ಕುಟುಂಬದ ವೈಮನಸ್ಸು ಕೊನೆಗೊಂಡಿದೆ. ಸೋದರ ಸಂಬಂಧಿಗಳು ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದಾರೆ. ಉದ್ಧವ್ ಠಾಕ್ರೆ ಹಾಗೂ ರಾಜ್‌ ಠಾಕ್ರೆ ಸಹೋದರರು ಮತ್ತೆ ಒಂದಾಗಿದ್ದಾರೆ.

ಉದ್ಧವ್ ಹಾಗೂ ರಾಜ್ ಠಾಕ್ರೆ 2005ರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೇ ಕೊನೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 20 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಮತ್ತೆ ಕೈಜೋಡಿಸಿ ನಿಂತಿದ್ದಾರೆ. ವಾಯ್ಸ್ ಆಫ್ ಮರಾಠಿ ಹೆಸರಲ್ಲಿ ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಒಗ್ಗೂಡಿದ್ದಾರೆ.

2003ರಲ್ಲಿ ಉದ್ಧವ್ ಠಾಕ್ರೆಯನ್ನು, ಶಿವಸೇನಾ ಪಕ್ಷದ ಕಾರ್ಯಕಾರಿ ಅಧ್ಯಕ್ಷನನ್ನಾಗಿ ಮಾಡಲಾಗಿತ್ತು. 2005ರಲ್ಲಿ ಶಿವಸೇನಾ ಪಕ್ಷ ಬಾಳ ಠಾಕ್ರೆ ನೇತೃತ್ವದಲ್ಲಿ ಮುನ್ನಡೆಯುತ್ತಿತ್ತು. ಹಲವು ಭಿನ್ನಾಭಿಪ್ರಾಯಗಳಿಂದ ರಾಜ್ ಠಾಕ್ರೆ, ಪಕ್ಷ ತೊರೆದಿದ್ರು. ನನ್ನನ್ನು ಅವಮಾನದಿಂದ ನಡೆಸಿಕೊಳ್ಳಲಾಗಿದೆ ಅಂತಾ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ರು. ಬಳಿಕ 2006ರಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಪಕ್ಷ ಹುಟ್ಟು ಹಾಕಿದ್ರು.

2005ರಿಂದ 2025ರವರೆಗೆ ಸಹೋದರ ಸಂಬಂಧಿಗಳೇ ಆಗಿದ್ರೂ ಶತ್ರುಗಳಂತೆ ಆಡ್ತಿದ್ರು. ಸಿಎಂ ದೇವೇಂದ್ರ ಫಡ್ನಿವಿಸ್ ನೇತೃತ್ವದಲ್ಲಿ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೆಲ ಬದಲಾವಣೆಗಳನ್ನು ಮಾಡಿತ್ತು. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ 3ನೇ ಭಾಷೆಯನ್ನಾಗಿ ಹಿಂದಿಯನ್ನು ಹೇರಿಲಾಗಿತ್ತು. ಇದನ್ನು ಉದ್ದವ್ ಠಾಕ್ರೆ, ರಾಜ್ ಠಾಕ್ರೆ ಪಕ್ಷಾತೀತವಾಗಿ ಖಂಡಿಸಿದ್ರು. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ತ್ರಿಭಾಷಾ ಸೂತ್ರ ಹಿಂಪಡೆಯಲಾಗಿತ್ತು.

ಇದು ಠಾಕ್ರೆ ಕುಟುಂಬದ ಕುಡಿಗಳ ಶಕ್ತಿಯನ್ನು ತೋರಿಸಿತ್ತು. ಒಗ್ಗಟ್ಟಾಗಿ ನಿಂತ್ರೆ ಯಾವುದು ಅಸಾಧ್ಯವಲ್ಲ ಅನ್ನೋದನ್ನು ಸಾಬೀತು ಮಾಡಿತ್ತು. ಇದೊಂದು ಘಟನೆ, ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಒಂದಾಗುವಂತೆ ಮಾಡಿದೆ. ಮುಂಬೈನ ಬೃಹತ್ ಸಮಾವೇಶದಲ್ಲಿ ಮುನಿಸು ಮರೆತು ಸಹೋದರರ ಒಂದಾಗಿ ಘರ್ಜಿಸಿದ್ದಾರೆ. ಶೀಘ್ರದಲ್ಲೇ ಮುಂಬೈ ಪಾಲಿಕೆ ಚುನಾವಣೆ ಘೋಷಣೆ ಮಾಡಲಾಗ್ತಿದ್ದು, ಹಿಂದಿ ಭಾಷೆಯನ್ನೇ ಅಸ್ತ್ರವಾಗಿ ಪ್ರಯೋಗಿಸಲಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಒಗ್ಗಟ್ಟೇ ನಮ್ಮ ಶಕ್ತಿ, ನಾವು ಒಟ್ಟಾಗಿ ಬಂದಿದ್ದೀವಿ. ಒಟ್ಟಾಗೇ ಇರುತ್ತೇವೆ ಅಂತಾ ಶಪಥ ಮಾಡಿದ್ರು. ರಾಜ್ ಠಾಕ್ರೆ ಕೂಡ ಮಾತನಾಡಿ. ಯಾವುದನ್ನು ಬಾಳ ಠಾಕ್ರೆ ಮಾಡಲಿಲ್ಲವೋ. ಯಾವುದನ್ನು ಇತರೆ ನಾಯಕರು ಮಾಡಲಿಲ್ಲವೋ ಅದನ್ನು ದೇವೇಂದ್ರ ಫಡ್ನವಿಸ್ ಮಾಡಿದ್ದಾರೆ. ನಾವಿಬ್ಬರು ಅದರ ವಿರುದ್ಧ ಒಗ್ಗಟ್ಟಾಗಿದ್ದೀವೆ. ನಿಮಗೆ ವಿಧಾನ್ ಭವನದಲ್ಲಿ ಅಧಿಕಾರ ಇರಬಹುದು. ನಮಗೆ ರಸ್ತೆಗಳಲ್ಲಿ ಅಧಿಕಾರ ಇದೆ. ಬೇರೆ ರಾಜ್ಯಗಳಲ್ಲಿ ಇಲ್ಲದ್ದು ಮಹಾರಾಷ್ಟ್ರದಲ್ಲೇಕೆ. ಹಿಂದಿ ಕೇವಲ 200 ವರ್ಷಗಳ ಹಳೆಯ ಭಾಷೆ. ಮಹಾರಾಷ್ಟ್ರ ಮೇಲೆ ಹೇರಿಕೆ ಮಾಡಿದ್ರೆ ಏನಾಗುತ್ತೆ ಅನ್ನೋದನ್ನು ನೀವೇ ನೋಡಿ ಅಂತಾ ಬಿಜೆಪಿಗೆ ವಾರ್ನ್ ಮಾಡಿದ್ದಾರೆ.

- Advertisement -

Latest Posts

Don't Miss