ಕೊಪ್ಪಳ : ರಾಜ್ಯ ಸರ್ಕಾರದ ಕುರಿತು ತಮ್ಮದೇ ಆದ ಶೈಲಿಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತ, ವಿಪಕ್ಷಗಳ ಎದುರು ಕೈ ನಾಯಕರಿಗೆ ಮುಜುಗರ ತಂದೊಡ್ಡುತ್ತಿರು ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರೆಡ್ಡಿ ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿದೆ ಎಂದು ಹೇಳುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಅಲ್ಲದೆ ಗ್ಯಾರಂಟಿ ಯೋಜನೆಗಳಿಂದ ಅಭವೃದ್ದಿ ಕಾರ್ಯಗಳು ಆಗುತ್ತಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು.
ಆದರೆ ಇದೀಗ ಮತ್ತೆ ಸುದ್ದಿಯಲ್ಲಿರುವ ರಾಯರೆಡ್ಡಿ ನಮಗೆ ಗ್ಯಾರಂಟಿ ಬೇಡ ಅಂತಾ ಹೇಳಿ ಬಿಡಿ ಅದೇ ದುಡ್ಡಲ್ಲಿ ರಸ್ತೆ ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ಕೊಪ್ಪಳದ ಕುಕನೂರ ತಾಲೂಕಿನ ರಾಯವಣಕಿ ಗ್ರಾಮದಲ್ಲಿ ಮಾತನಾಡಿರುವ ಅವರು, ನಮಗೆ ಗ್ಯಾರಂಟಿ ಬೇಡ ಅಂತ ಹೇಳಿದರೆ. ನಮ್ಮ ಜನ ಏನೂ ಬೇಡ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡುತ್ತೇನೆ ಎಂದಿದ್ದಾರೆ.
ಗ್ರಾಮೀಣ ಭಾಗದ ರಸ್ತೆ ಮಾಡಿಸುವುದು ಕಷ್ಟವಾಗುತ್ತದೆ. ಅಲ್ಲದೆ ನಮ್ಮ ಹತ್ತಿರ ಇರುವ ಹಣದಲ್ಲಿ ಎಲ್ಲವನ್ನೂ ನೋಡಿಕೊಂಡು ಕೆಲಸ ಮಾಡಬೇಕು. ಈಗಾಗಲೇ 1.24 ಲಕ್ಷ ಕೋಟಿ ರೂಪಾಯಿಯಗಳ ಮೊತ್ತದೆ ವಿವಿಧ ಉಚಿತ ಯೋಜನೆಗಳನ್ನು ನೀಡುತ್ತಿದ್ದೇವೆ. ರಾಜ್ಯದಲ್ಲಿ ಗ್ಯಾರಂಟಿಗಳಿಂದ ನೇರವಾಗಿ 54 ಕೋಟಿ ರೂಪಾಯಿಗಳಷ್ಟು ಹಣವನ್ನು ವಿತರಿಸಲಾಗುತ್ತಿದೆ. ಇನ್ನು ಮುಂಬರುವ ದಿನಗಳಲ್ಲಿ ರಸ್ತೆಗಳಿಗೂ ಹಣ ನೀಡುತ್ತೇವೆ ಹಾಗೂ ಗ್ರಾಮೀಣ ಭಾಗದ ಹಳ್ಳಿಗಳ ರಸ್ತೆಗಳನ್ನು ಸರಿಪಡಿಸುತ್ತೇವೆ ಅಂತ, ತಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ಆಗದಿರುವುದಕ್ಕೆ ಜನರ ಪ್ರಶ್ನೆಗಳಿಗೆ ರಾಯರೆಡ್ಡಿ ಹೀಗೆ ಉತ್ತರಿಸಿದ್ದಾರೆ.
ಇನ್ನೂ ಇಷ್ಟು ದಿನಗಳ ಕಾಲ ರಾಜ್ಯ ಸರ್ಕಾರದ ಬಳಿ ಯಾವುದೇ ಅನುದಾನದ ಕೊರತೆಯಿಲ್ಲ, ಎಲ್ಲವೂ ಸರಿಯಾಗಿದೆ. ಅಲ್ಲದೆ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿಲ್ಲ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಹಲವು ಸಚಿವರೂ ಕೂಡ ಸಿಎಂ ಹೇಳಿಕೆಗೆ ಬದ್ಧವಾಗಿ ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಕೆಲ ಶಾಸಕರು ಸರ್ಕಾರದ ಕಾರ್ಯವೈಖರಿಯ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿರುವುದರ ನಡುವೆಯೇ ಇದೀಗ ರಾಯರೆಡ್ಡಿ ಹೊಸ ರಾಗ ಎಳೆಯುತ್ತಿರುವುದನ್ನು ನೋಡಿದಾಗ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಬೀಳುತ್ತಾ ಎಂಬ ಪ್ರಶ್ನೆ ಮೂಡುತ್ತಿದ್ದು, ಸದ್ಯ ಸಿಎಂ ಆರ್ಥಿಕ ಸಲಹೆಗಾರರ ಈ ಮಾತು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.