Sunday, July 20, 2025

Latest Posts

ಶಿಕ್ಷಕಿಗೆ ಚಾಕು ಇರಿದು ತಾಳಿ ಕಟ್ಟಿದ ಭಗ್ನ ಪ್ರೇಮಿ! : ಪ್ರೀತಿ ಕೊಂದು ಯುವಕನ ವಿಕೃತಿ

- Advertisement -

ಮಂಡ್ಯ : ಈ ಪ್ರೀತಿ ಅನ್ನೋದು ಹಾಗೆ. ಹುಡುಗ, ಹುಡುಗಿ ಮಧ್ಯೆ ಹೊಂದಾಣಿಕೆ ಇದ್ರೆ ಸೊಗಸಾಗಿರುತ್ತೆ. ಅದೇ ವೈಮನಸ್ಸು, ಭಿನ್ನಾಭಿಪ್ರಾಯ, ಅನುಮಾನ ಶುರುವಾದ್ರೆ ದುರಂತಕ್ಕೆ ಕಾರಣವಾಗುತ್ತೆ. ಮಂಡ್ಯದ ಭಗ್ನ ಪ್ರೇಮಿಯೊಬ್ಬ ಯುವತಿಯ ಮೇಲೆ ದೌರ್ಜನ್ಯವೆಸಗಿ ಪ್ರಾಣವನ್ನೇ ತೆಗೆದಿದ್ದಾನೆ.

ತನ್ನನ್ನು ಪ್ರೀತಿಸಲು ಯುವತಿ ನಿರಾಕರಿಸಿದ್ದಕ್ಕೆ ಅವಳಿಗೆ ಚಾಕುವಿನಿಂದ ಇರಿದಿದ್ದಾನೆ. ಅಲ್ಲದೆ ಬಲವಂತವಾಗಿ ತಾಳಿ ಕಟ್ಟುವ ಮೂಲಕ ತನ್ನ ವಿಕೃತಿ ಮೆರೆದಿದ್ದಾನೆ. ಚಾಕು ಇರಿತಕ್ಕೊಳಗಾಗಿದ್ದ 36 ವರ್ಷದ ಯುವತಿ ಪೂರ್ಣಿಮಾ ಮೃತಪಟ್ಟಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರದವರಾಗಿದ್ದ ಮೃತ ಪೂರ್ಣಿಮಾ ತಮ್ಮದೇ ಗ್ರಾಮದ ಬಾಲ್ಯ ಸ್ನೇಹಿತ ಅಭಿಷೇಕ್‌ ಜೊತೆಗೆ ಸ್ನೇಹ ಬೆಳೆಸಿಕೊಂಡಿದ್ದರು. ಖಾಸಗಿ ಶಾಲಾ ಶಿಕ್ಷಕಿಯಾಗಿ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೂರ್ಣಿಮಾ ಅವರನ್ನು ಪ್ರೀತಿಸುವಂತೆ ಅಭಿಷೇಕ್‌ ಒತ್ತಾಯಿಸುತ್ತಿದ್ದ. ಆದರೆ ನಮ್ಮ ಮನೆಯವರ ಒಪ್ಪಿಗೆ ಇಲ್ಲದೆ ನಾನು ಪ್ರೀತಿಸುವುದಿಲ್ಲ ಎಂದು ಯುವತಿ ನಿರಾಕರಿಸಿದ್ದಳು.

ಕಳೆದ ಶುಕ್ರವಾರ ಇಬ್ಬರೂ ಸೇರಿ ಕೃಷ್ಣಮೂರ್ತಿಪುರಂನಲ್ಲಿನ ಉದ್ಯಾನವನಕ್ಕೆ ಹೋಗಿದ್ದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಬಳಿಕ ಆರೋಪಿಯು ಯುವತಿಗೆ ಚಾಕು ಇರಿದಿದ್ದಾನೆ ಎಂದು ಲಕ್ಷ್ಮಿಪುರಂ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ತಾನೇ ಚಾಕು ಇರಿದಿದ್ದ ಪೂರ್ಣಿಮಾಳನ್ನು ಆಸ್ಪತ್ರೆಗೆ ಕರೆದುಕೊಂಡು, ಅವಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ತಾಳಿ ಕಟ್ಟಿ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾನೆ. ಘಟನೆಯ ಬಳಿಕ ಆರೋಪಿ ಅಭಿಷೇಕ್‌ ನಾಪತ್ತೆಯಾಗಿದ್ದ, ಆತನನ್ನು ಹುಡುಕಾಡಿ ಅದೇ ದಿನ ರಾತ್ರಿಯೇ ಅರೆಸ್ಟ್‌ ಮಾಡಿದ್ದೇವೆ. ಬಳಿಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳಬೇಕೆಂದುಕೊಂಡಿದ್ದ‌ ಯುವಕ ಅಭಿಷೇಕ್ ತನ್ನ ವಿಕೃತಿಯಿಂದ ಅನ್ಯಾಯವಾಗಿ ಟೀಚರಮ್ಮನ ಬಾಳನ್ನೇ ಕಿತ್ತುಕೊಂಡಿದ್ದಾನೆ. ಅಲ್ಲದೆ ಶಿಕ್ಷಕಿಯಾಗಿ ತನ್ನ ಪಾಡಿಗೆ ತಾನಿದ್ದರು. ಮಕ್ಕಳ ಭವಿಷ್ಯವನ್ನು ಬೆಳಗುವ ಕೆಲಸ ಮಾಡುತ್ತಿದ್ದ ಪೂರ್ಣಿಮಾ ದುರಂತ ಅಂತ್ಯ ಕಂಡಿದ್ದು ಮಾತ್ರ ನಿಜಕ್ಕೂ ವಿಪರ್ಯಾಸವೇ ಸರಿ.

ಕಳೆದ ಜನವರಿ ತಿಂಗಳಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಬೆಟ್ಟದಲ್ಲಿ ಶಿಕ್ಷಕಿ ದೀಪಿಕಾಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿತ್ತು. ಜನವರಿ 19ರಂದು ತನ್ನ ಹುಟ್ಟುಹಬ್ಬದ ನೆಪದಲ್ಲಿ ಮೇಲುಕೋಟೆಯ ಬೆಟ್ಟಕ್ಕೆ ದೀಪಿಕಾಳನ್ನು ನಿತೀಶ್ ಕರೆಸಿಕೊಂಡಿದ್ದನು. ಅಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ನಂತರ ಕೋಪಗೊಂಡ ನಿತೀಶ್ ದೀಪಿಕಾಳನ್ನು ಹತ್ಯೆ ಮಾಡಿದ್ದನು. ಇದೀಗ ಮಂಡ್ಯದ ಮತ್ತೊಬ್ಬ ಶಿಕ್ಷಕಿ ಪೂರ್ಣಿಮಾ ಅವರು ಪ್ರೇಮಿಯ ಕುರುಡು ಪ್ರೀತಿಗೆ ಬಲಿಯಾಗಿದ್ದಾರೆ.

- Advertisement -

Latest Posts

Don't Miss