ಬೆಂಗಳೂರು : ಕಳೆದವಾರವಷ್ಟೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆಯ ಕುರಿತ ಚರ್ಚೆಗಳಿಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಸ್ಟಾಪ್ ನೀಡುವ ಪ್ರಯತ್ನ ಮಾಡಿದ್ದಾರೆ. ಐದು ವರ್ಷ ನಾನೇ ಸಿಎಂ ಎಂದು ಹೇಳುವ ಮೂಲಕ ಇಷ್ಟು ದಿನಗಳ ಕಾಲ ಕೈ ಪಾಳಯದಲ್ಲಿ ಜೋರಾಗಿದ್ದ ಹಲವು ರೀತಿಯ ಬಣ ಬಡಿದಾಟಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದರು. ಇನ್ನೂ ಸಿದ್ದರಾಮಯ್ಯನವರ ಈ ಹೇಳಿಕೆಗೆ ಹತಾಶ ಮನೋಭಾವದಿಂದಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ನನ್ನ ಮುಂದೆ ಬೇರೇನೂ ಆಯ್ಕೆಗಳಿಲ್ಲ ಎಂದು ಹೇಳಿದ್ದರು. ನಾನು ಸಿದ್ದರಾಮಯ್ಯನವರ ಬೆನ್ನಿಗೆ ನಿಂತು, ಅವರಿಗೆ ಸಹಕಾರ ನೀಡುತ್ತೇನೆಂದು ಪರೋಕ್ಷವಾಗಿ ಸಿದ್ದು ನಾಯಕತ್ವವನ್ನು ಒಪ್ಪಿಕೊಂಡಿದ್ದರು.
ಆದರೆ ಕೇವಲ ಒಂದೇ ವಾರದಲ್ಲಿ ಎಲ್ಲವೂ ಬದಲಾಗುತ್ತಿರುವಂತೆ ಕಂಡು ಬರುತ್ತಿದೆ. ಡಿಕೆ ಶಿವಕುಮಾರ್, ತಾವು ಸಿಎಂ ಆಗಬೇಕೆಂದಿದ್ದ ಶಾಸಕರಿಗೆ ಹಾಗೂ ಅಭಿಮಾನಿಗಳಿಗೆ ಸುಮ್ಮನಿರುವಂತೆ ತಾಕೀತು ಮಾಡಿದ್ದರು. ಇದೀಗ ಅದೇ ಡಿಕೆಶಿ ತಮ್ಮ ಇಂಗಿತವನ್ನು ಪಕ್ಷದ ಕಾರ್ಯಕರ್ತರು ಹಾಗೂ ತಮ್ಮ ಅಭಿಮಾನಿಗಳ ಮೇಲೆ ಹಾಕಿದ್ದಾರೆ.
ಇನ್ನೂ ಡಿಕೆ ಶಿವಕುಮಾರ್ ಅವರಿಗೆ ಉನ್ನತ ಸ್ಥಾನ ಸಿಗಬೇಕು ಎಂದು ಹೇಳಿದ್ದ ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರ ಸೋಮೇಶ್ವರ ಸ್ವಾಮೀಜಿ ಅವರ ಹೇಳಿಕೆಗೆ ಫುಲ್ ಖುಷ್ ಆಗಿದ್ದಾರೆ. ಅಲ್ಲದೆ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಮುಖ್ಯಮಂತ್ರಿಯಾಗಲಿ ಎಂದು ಜನ ಮತ್ತು ಸ್ವಾಮೀಜಿಗಳು ಅಪೇಕ್ಷೆ ಪಡುತ್ತಾರೆ, ಹಾಗಂತ ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ಪಕ್ಷ ಕಟ್ಟಿರುವ ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳು. ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.
ಕೆಲವರು ತಮ್ಮ ಚಪಲಕ್ಕೆ ಮಾತನಾಡುತ್ತಾರೆ, ಅದರ ಅವಶ್ಯಕತೆ ನನಗೆ ಇಲ್ಲ. ಈಗಾಗಲೇ ಮುಖ್ಯಮಂತ್ರಿ ಬದಲಾವಣೆ ವಿಚಾರದ ಕುರಿತು ಯಾರೂ ಮಾತನಾಡಬಾರದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಪಕ್ಷದ ಸೂಚನೆ ಹಾಗೂ ಜನರ ಭಾವನೆಯಂತೆ ಕೆಲಸ ಮಾಡಬೇಕು ಎಂದಿದ್ದಾರೆ. ಒಡಂಬಡಿಕೆಯಂತೆ ಅಧಿಕಾರ ನೀಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅದನ್ನು ಸಾರ್ವಜನಿಕವಾಗಿ ಯಾಕೆ ಮಾತನಾಡಲಿ ನಾನುಂಟು, ಪಕ್ಷ ಉಂಟು. ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಇಷ್ಟು ದಿನಗಳ ಕಾಲ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಕುರಿತ ನಾನಾ ರೀತಿಯ ಚರ್ಚೆಗಳಿಗೆ ಒಂದು ಹಂತಕ್ಕೆ ಹೈಕಮಾಂಡ್ ಸದ್ಯಕ್ಕೆ ಪೂರ್ಣ ವಿರಾಮ ನೀಡಿದಂತೆ ಕಂಡು ಬರುತ್ತಿದೆ. ಆದರೆ ಇದೀಗ ಮತ್ತೆ ಡಿಕೆ ಶಿವಕುಮಾರ್ ಅವರು ಸ್ವಾಮೀಜಿಗಳು ಹಾಗೂ ಅಭಿಮಾನಿಗಳನ್ನು ಮುಂದಿಟ್ಟುಕೊಂಡು ಹೊಸ ರಾಜಕೀಯದಾಟವನ್ನು ಶುರುಮಾಡಿದಂತೆ ಕಂಡು ಬರುತ್ತಿದೆ.