ಮಂಜುಮ್ಮೆಲ್ ಸಿನಿಮಾದ ರೀತಿಯಲ್ಲಿ ಕಬಿನಿಯಲ್ಲಿ ಹಸು ರಕ್ಷಣೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಬಳಿ ಹಳ್ಳಕ್ಕೆ ಬಿದ್ದಿದ್ದ ಹಸುವನ್ನು ಸುಮಾರು 1 ಗಂಟೆಯ ಕಾರ್ಯಚರಣೆಯ ನಂತರ ರಕ್ಷಣೆ ಮಾಡಲಾಯಿತು. ಹಳ್ಳಕ್ಕೆ ಹಸು ಬಿದ್ದಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮದ ಸ್ಥಳೀಯರು ಒಟ್ಟಾಗಿ ಹಸವನ್ನು ಮೇಲೆ ಎತ್ತುವುದಕ್ಕೆ ಪ್ರಯತ್ನ ಮಾಡಿದ್ದಾರೆ.
ಬೀದರಹಳ್ಳಿ ಗ್ರಾಮದ ಶಿವಲಿಂಗ ನಾಯಕ ಎಂಬುವವರಿಗೆ ಸೇರಿದ ಹಸುವನ್ನು ಮೇವು ಮೇಯುವುದಕ್ಕೆ ಬಿಡಲಾಗಿತ್ತು. ಹಸು ಮೇವು ಮೇಯುತ್ತಾ ಕಾಮಗಾರಿ ನಡೆಸುವುದಕ್ಕಾಗಿ ತೆಗೆದಿದ್ದ ಹಳ್ಳಕ್ಕೆ ಬಿದ್ದಿತ್ತು. ಗ್ರಾಮದ ಸ್ಥಳಿಯರು ಒಟ್ಟಾಗಿ ಹಸುವನ್ನು ಎತ್ತಲು ಪ್ರಯತ್ನ ಪಟ್ಟರು. ಆದರೆ ಆ ಪ್ರಯತ್ನ ಸಫಲವಾಗಲಿಲ್ಲ. ನಂತರ ಕ್ರೇನ್ ಸಹಾಯದಿಂದ ಒಂದು ಗಂಟೆ ಕಾಲ ನಡೆದ ಕಾರ್ಯಾಚರಣೆಯಲ್ಲಿ ಹಸುವನ್ನು 20 ಅಡಿ ಹಳ್ಳದಿಂದ ಯಶಸ್ವಿಯಾಗಿ ಎತ್ತಲಾಯಿತು. ಕಬಿನಿಯ ಆಪರೇಷನ್ ಹಸು ಯಶ್ವಸಿಯಾಗಿದ್ದಕ್ಕೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಅದು ಯಾರ ಪುಣ್ಯವೋ ಏನೋ ಅಷ್ಟು ಆಳಕ್ಕೆ ಬಿದ್ದರೂ ಆಕಳು ಯಾವುದೇ ಗಾಯಗಳಾಗದೇ ಸುರಕ್ಷಿತವಾಗಿ ಮರಳಿ ಬಂದಿತು. ಗ್ರಾಮದ ಸ್ಥಳೀಯರು ಎಲ್ಲಾ ಸೇರಿಕೊಂಡು ಹಸವನ್ನು ಮೈ ದಡವಿ ಸಂತೈಸಿದರು. ಆಕಳು ಗಾಬರಿಯಿಂದ ಇನ್ನೂ ಜೋರಾಗಿ ಉಸಿರಾಡುತ್ತಿತ್ತು. ಅಲ್ಲಿದ್ದವರ ಮುಖದಲ್ಲಿ ಗಾಬರಿಯ ವಾತಾವರಣ, ಮುಂದೆ ಏನಾಗುತ್ತದೆ ಅನ್ನುವಂತಹ ತವಕ. ಹಳ್ಳದಲ್ಲಿ ಕಾಲು ಜಾರಿ ಬಿದ್ದು ಒದ್ದಾಡುತ್ತಿದ್ದ ಮೂಕ ಜೀವ ನೋಡಿ ನೆರೆದವರ ಕಣ್ಣಲ್ಲಿ ಆತಂಕ, ಕಣ್ಣೀರು, ಆಶ್ಚರ್ಯ ಎಲ್ಲಾ ಒಟ್ಟಾಗಿದ್ದ ಸಮಯದಲ್ಲೇ ಛಲ ಬಿಡದೇ ಮಾತು ಬಾರದ ಪ್ರಾಣಿಯ ಜೀವವನ್ನು ಉಳಿಸಿದೆವು ಎನ್ನುವ ನೆಮ್ಮದಿ ಕೊಟ್ಟ ಸಾರ್ಥಕ ಕಾರ್ಯಾಚರಣೆ ಇದಾಗಿತ್ತು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ