Friday, July 11, 2025

Latest Posts

ಬಿ.ಕೆ.ಹರಿಪ್ರಸಾದ್ ತೃತೀಯ ಲಿಂಗಿ, ಮಹಿಳೆಯರ ಬಳಿ ಕ್ಷಮೆ ಕೇಳಬೇಕು: ವಿಜಯೇಂದ್ರ ಆಗ್ರಹ: ಕಾರಣವೇನು..?

- Advertisement -

Political News: ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಬಿ.ಕೆ.ಹರಿಪ್ರಸಾದ್ ಬಿಜೆಪಿ ರಾಷ್ಟ್ರಾಧ್ಯಕ್ಷರನ್ನು ಆಯ್ಕೆ ಮಾಡಲು ಅರ್ಧನಾರೇಶ್ವರರನ್ನು ಹುಡುಕಲಿ ಎಂದು ವ್ಯಂಗ್ಯವಾಡಿದ್ದಾರೆ. ಈ ವ್ಯಂಗ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದು, ಇಂಥ ಹೇಳಿಕೆ ನೀಡಿದ್ದಕ್ಕೆ ನೀವು ಈ ಕೂಡಲೇ ಸ್ತ್ರೀ ಸಮುದಾಯ ಹಾಗೂ ತೃತೀಯ ಲಿಂಗಿ ಸಮುದಾಯಗಳ ಕ್ಷಮೆ ಯಾಚಿಸಿ ಎಂದು ಆಗ್ರಹಿಸಿದ್ದಾರೆ.

ಬಿ.ಕೆ ಹರಿಪ್ರಸಾದ್ ಅವರೇ, ನಮ್ಮ ಸ್ಥಾನ-ಮಾನಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದು ಬೇಡ. ಭಾರತೀಯ ಜನತಾ ಪಾರ್ಟಿಯಲ್ಲಿ ‘ಕಾರ್ಯಕರ್ತ’ ಎಂಬುದೇ ಬಹುದೊಡ್ಡ ಹುದ್ದೆ, ಅದಕ್ಕಿಂತ ದೊಡ್ಡ ಸ್ಥಾನಮಾನ ಮತ್ತೊಂದು ಇಲ್ಲ ಎಂದು ಭಾವಿಸುವುದೇ ನಮ್ಮ ಪಕ್ಷ ನಮಗೆ ಕಲಿಸಿಕೊಟ್ಟಿರುವ ಶಿಸ್ತು ಹಾಗೂ ಸಂಸ್ಕಾರ, ಈ ಕಾರಣಕ್ಕಾಗಿಯೇ ನಮಗೆ ದೊರೆಯುವ ಪ್ರತಿಯೊಂದು ಅವಕಾಶಗಳನ್ನು ಜವಾಬ್ದಾರಿ ಎಂದು ಪರಿಗಣಿಸಿ ನಮ್ಮನ್ನು ಆ ನಿಟ್ಟಿನಲ್ಲಿ ಸಮರ್ಪಿಸಿಕೊಳ್ಳುತ್ತೇವೆ.  ಪ್ರಧಾನ ಮಂತ್ರಿ ಸ್ಥಾನವನ್ನು ಪ್ರಧಾನ ಸೇವಕ ಎಂದು ಪರಿಗಣಿಸಿ ತಮನ್ನು ದೇಶಕ್ಕಾಗಿ ಸಮರ್ಪಿಸಿಕೊಂಡವರು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ಅವರು, ಇದು ನಮ್ಮ ಭಾರತೀಯ ಜನತಾ ಪಾರ್ಟಿಯ ಪರಮ ಧ್ಯೇಯ ಎಂದು ವಿಜಯೇಂದ್ರ ಹೇಳಿದ್ದಾರೆ.

‘ದಯವಿಲ್ಲದ ಧರ್ಮವಾವುದಯ್ಯಾ ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ …..ಎಂಬ ಬಸವಣ್ಣನವರ ತತ್ವವನ್ನು ಆಧರಿಸಿ ಸಕಲ ಜೀವರಾಶಿಗಳಿಗೆಲ್ಲ ನೆರಳು ನೀಡುವ ಸಂಕಲ್ಪ ಹೊತ್ತ ‘ಬೃಹತ್ ರಾಜಕೀಯ ವೃಕ್ಷ ‘ನಮ್ಮ ಭಾರತೀಯ ಜನತಾ ಪಾರ್ಟಿ.

‘ಮಂಜಮ್ಮ ಜೋಗತಿ’ ಅವರನ್ನು ಗುರುತಿಸಿ ಕರ್ನಾಟಕದ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿನಿಧಿಸುವ ಜಾನಪದ ಅಕಾಡೆಮಿಯ ಅಧ್ಯಕ್ಷರನ್ನಾಗಿಸಿ ‘ಪದ್ಮ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿ ಲಿಂಗತಾರತಮ್ಯವನ್ನು ಮೆಟ್ಟಿನಿಂತು ಒಟ್ಟು ಸಮಾಜದ ಕಲ್ಪನೆಯ ದೇಶ ಕಟ್ಟುವ ಸಂಕಲ್ಪ ಸಾಕ್ಷಿಕರಿಸಿದ ಪಕ್ಷ ನಮ್ಮದು. ಅರ್ಹತೆ ಇರುವ ಪ್ರತಿಯೊಬ್ಬರನ್ನು ಗುರುತಿಸಿ, ಗೌರವಿಸಿ ಜವಾಬ್ದಾರಿ ಸ್ಥಾನಗಳನ್ನು ನೀಡುವ ಆದರ್ಶ ನಾವು ಅಳವಡಿಸಿಕೊಂಡಿದ್ದೇವೆ.

ಆದಿವಾಸಿ ಬುಡಕಟ್ಟು ಮೂಲದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಾಧ್ಯಕ್ಷ ಹುದ್ದೆಯಲ್ಲಿ ಕೂರಿಸಿ ಸಂವಿಧಾನದ ಆಶಯ ಪ್ರಜಾಪ್ರಭುತ್ವದ ಸುಂದರತೆಯನ್ನು ವಿಶ್ವಕ್ಕೆ ಪಸರಿಸಿದ ಹೆಗ್ಗಳಿಕೆ ನಮ್ಮದು. ಶ್ರೀಮತಿ ನಿರ್ಮಲ ಸೀತಾರಾಮನ್ ರವರಂತಹ ಸಮರ್ಥ ವಿತ್ತ ಸಚಿವೆಯನ್ನು ದೇಶಕ್ಕೆ ಕೊಟ್ಟ ಹೆಮ್ಮೆ ನಮ್ಮದು, ಇಂತಹ ಉದಾಹರಣೆಗಳು ಸಾಲು, ಸಾಲು ನಮ್ಮ ಮುಂದಿದೆ, ಭವಿಷ್ಯತ್ತಿನಲ್ಲಿ ನಾರಿಯರು ,ಅರ್ಧನಾರಿಯರು ಯಾರೇ ಇರಲಿ ಅವರಿಗಾಗಿ ಅವಕಾಶದ ಬಾಗಿಲು ಭಾರತೀಯ ಜನತಾ ಪಾರ್ಟಿಯಲ್ಲಿ ಸದಾ ತೆರೆದಿರುತ್ತದೆ.

ಹಿಂಬಾಗಿಲಿನಿಂದ ತಲೆ ತೂರಿಸಿ ಬರುವ ನಾಮಿನೇಷನ್ (Nomination) ರಾಜಕಾರಣಿ ಎಂದು ನಿಮ್ಮ ಪಕ್ಷದವರಿಂದಲೇ ಕುಹಕವಾಡಿಸಿಕೊಳ್ಳುವ ನೀವು ಎಂದೂ ಜನರಿಂದ ಆಯ್ಕೆಯಾದವರಲ್ಲ, ನಿಮ್ಮಿಂದ ಸಮುದಾಯದ ಬಗೆಗಿನ ಕಾಳಜಿಯ ಮಾತುಗಳನ್ನು ನಿರೀಕ್ಷಿಸುವುದು ಮೂರ್ಖತನ. ನಾರಿಯರು, ಅರ್ಧ ನಾರಿಯರ ಸಾಮರ್ಥ್ಯದ ಬಗ್ಗೆ ವ್ಯಂಗ್ಯ ವಾಡಿರುವ ನಿಮ್ಮ ನಡೆ ದುಶ್ಯಾಸನ ಸಂಸ್ಕೃತಿಯನ್ನು ನೆನಪಿಸುತ್ತದೆ. ಕಾಂಗ್ರೆಸ್ ಪಕ್ಷ ಎಂದೂ ಧರ್ಮರಾಯನಂತೆ ನಡೆದುಕೊಂಡಿಲ್ಲ, ಅದೇನಿದ್ದರೂ ದುರ್ಯೋಧನ, ದುಶ್ಯಾಸನರನ್ನು ಪೋಷಿಸುವ ದೃತರಾಷ್ಟ್ರನ ಸಂಸ್ಕೃತಿ ಎಂಬುದು ದೇಶಕ್ಕೆ ತಿಳಿದ ವಿಷಯವಾಗಿದೆ.

ನೀವು ವ್ಯಂಗ್ಯವಾಡಿ ಅಪಮಾನಿಸಿದ ನಾರಿಯರು, ಅರ್ಧ ನಾರಿಯರು ಭವಿಷ್ಯತ್ತಿನಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುವ ಅವಕಾಶಗಳು ಇರುವುದು ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ. ನಿಮ್ಮ ನಾಲಿಗೆಯಿಂದ ಹೊರ ಬಿದ್ದಿರುವ ಮಾತುಗಳು ಮಹಿಳೆಯರು ಹಾಗೂ ಮಂಗಳಮುಖಿಯರಿಗಷ್ಟೇ ಅಪಮಾನಿಸಿಲ್ಲ ಅದು ಭಾರತದ ಸಂಸ್ಕೃತಿಯನ್ನೂ ಅವಹೇಳನ ಮಾಡಿದಂತಾಗಿದೆ. ಈ ಕೂಡಲೇ ಸ್ತ್ರೀ ಸಮುದಾಯ ಹಾಗೂ ತೃತೀಯ ಲಿಂಗಿ ಸಮುದಾಯಗಳ ಕ್ಷಮೆ ಯಾಚಿಸಿ ಎಂದು ಬಿ.ಕೆ.ಹರಿಪ್ರಸಾದ್‌ಗೆ ವಿಜಯೇಂದ್ರ ಆಗ್ರಹಿಸಿದ್ದಾರೆ.

- Advertisement -

Latest Posts

Don't Miss