Chikkaballapura: ಚಿಕ್ಕಬಳ್ಳಾಪುರದಲ್ಲಿಂದು ಮಾತನಾಡಿರುವ ನಿಖಿಲ್ ಕುಮಾರ್, ದೇಶಕ್ಕೆ ಮೋದಿಯಾದರೆ, ರಾಜ್ಯಕ್ಕೆ ಕುಮಾರಣ್ಣ ಎನ್ನುವ ಮೂಲಕ, ಕುಮಾರಸ್ವಾಮಿಯವರು ಮತ್ತೆ ರಾಜ್ಯದ ಸಿಎಂ ಆಗಲಿ ಎಂದು ಆಶಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನದಿದಡ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮವನ್ನು ಪಕ್ಷದ ಮುಖಂಡರು ಹಾಗೂ ಹಿರಿಯ ಕಾರ್ಯಕರ್ತರೊಂದಿಗೆ ಉದ್ಘಾಟಿಸಿದ್ದಾರೆ.
ಈ ವೇಳೆ ಮಾತನಾಡಿರುವ ನಿಖಿಲ್ ಕುಮಾರ್, ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ರಾಜ್ಯಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಅಂಥ ವ್ಯಕ್ತಿ ಮತ್ತೆ ಸಿಎಂ ಆದರೆ ರಾಜ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ನಾನು ರಾಜ್ಯ ಪ್ರವಾಸದಲ್ಲಿದ್ದು, ಅಲ್ಲಿಯೂ ಹಲವರು ಕುಮಾರಣ್ಣನೇ ಮುಂದಿನ ಸಿಎಂ ಆಗಲಿ ಎಂದೆನ್ನುತ್ತಿದ್ದಾರೆಂದು ನಿಖಿಲ್ ಹೇಳಿದ್ದಾರೆ.
ಇನ್ನು ತನಗೆ ಜೆಡಿಎಸ್ ರಾಜ್ಯಾಧ್ಯಕ್ಷ ಆಗುವ ಯಾವ ಆಸೆಯೂ ಇಲ್ಲ ಎಂದು ಹೇಳಿರುವ ನಿಖಿಲ್ ಕುಮಾರ್, ನಾನು ಪಕ್ಷ ಸಂಘಟನೆಯಲ್ಲಿ ನಿರತನಾಗಿದ್ದೇನೆ. ಮುಂದೆ ಗ್ರಾಮ, ಪಂಚಾಯ್ತಿ ಚುನಾವಣೆ ಎದುರಾಗಲಿದೆ. ಅದಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ನಾನು ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಅಪೇಕ್ಷೆ ಇಡಲಿಲ್ಲವೆಂದು ಹೇಳಿದ್ದಾರೆ.