ಕಳೆದ ವರ್ಷ ಬೆಂಗಳೂರಿನ ಮೈಸೂರು ರಸ್ತೆಯ ಐತಿಹಾಸಕ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಸುವಾಗಲೇ ಆಡಳಿತ ಮಂಡಳಿಯ ಸದಸ್ಯರು ಹಣ ಎಗರಿಸಿದ್ದರು. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಂತರ ಈ ಘಟನೆಯ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸೂಚನೆ ನೀಡಿತ್ತು. ಅದರಂತೆ ಇದೀಗ ಮುಜರಾಯಿ ಇಲಾಖೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದು, ವರದಿಯಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವರ್ಗಾವಣೆಗೆ ಶಿಫಾರಸ್ಸು ಮಾಡಲಾಗಿದೆ.
ಗಾಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಆದರೂ, ಟ್ರಸ್ಟ್ನ ಪದಾಧಿಕಾರಿ ಹೊಂದಾಣಿಕೆ ಇಲ್ಲದೇ ಇರುವುದು ಹಾಗೂ ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದು, ಪ್ರತಿ ವರ್ಷ ಉಳಿತಾಯವಿಲ್ಲದೇ ವೆಚ್ಚ ಮಾಡಲಾಗುತ್ತಿದೆ. ಇದರಿಂದ ದೇವಸ್ಥಾನದ ಹಣವು ದುರುಪಯೋಗವಾಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿತ್ತು. ಅಲ್ಲದೆ, ಆದಾಯ ವೆಚ್ಚಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ಯಾವುದೇ ದಾಖಲೆಗಳನ್ನು ಇಡದೆ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ನೋಟೀಸ್ ನೀಡಿದ ನಂತರ ದಾಖಲೆಗಳನ್ನು ಸೃಷ್ಟಿಸಿರುವುದು ಕಂಡು ಬಂದಿದೆ.
ಇನ್ನು ದೇವಾಲಯದ ಸಿಬ್ಬಂದಿಗಳು ಹುಂಡಿ ಹಣ ಕದ್ದಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡಿದ ವಿಡಿಯೋ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಕುಂದು ಉಂಟು ಮಾಡಲಾಗಿರುತ್ತದೆ. ಆದ್ದರಿಂದ ಸಾರ್ವಜನಿಕ ಹಾಗೂ ಭಕ್ತಾಧಿಗಳ ಹಿತದೃಷ್ಟಿಯಿಂದ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ಕಾಯ್ದೆ 1997ರ ಸೆಕ್ಷನ್ 42 ಮತ್ತು 43ರಡಿಯಲ್ಲಿ ಸರ್ಕಾರದ ವಶಕ್ಕೆ ಪಡೆಯುವುದು ಸೂಕ್ತವಾಗಿರುತ್ತದೆ ಎಂದು ಮುಜರಾಯಿ ಇಲಾಖೆ ವರದಿ ಸಲ್ಲಿಸಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ