ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ನೂತನವಾಗಿ ನಿರ್ಮಾಣವಾಗಿರುವ ಸಿಗಂದೂರು ಸೇತುವೆಗೆ ನಾಮಕರಣ ಮಾಡಬೇಕೆಂದು ಅರ್ಜಿ ಸಲ್ಲಿಕೆಯಾಗಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಅರ್ಜಿದಾರರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿ ಹಿನ್ನೀರಿನಲ್ಲಿ ತಲೆ ಎತ್ತಿರುವ ಸೇತುವೆಯು ಆಕರ್ಷಕವಾಗಿದ್ದು, ಜನರನ್ನು ಸೆಳೆಯುತ್ತಿದೆ.
ಈ ಕುರಿತು ಶಿವಮೊಗ್ಗದ ಬಿದರೆ ಗ್ರಾಮದ ನಿವಾಸಿ ಕೆ. ಹರನಾಥ್ ರಾವ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರಿದ್ದ ನ್ಯಾಯಪೀಠ, ಎರಡೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಬಳಿಕ ಅರ್ಜಿಯ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿದೆ.
ಇನ್ನೂ ನೂತನವಾಗಿ ನಿರ್ಮಿಸಲಾಗಿರುವ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಕಳೆದ ಜುಲೈ 7ರಂದು ಕೇಂದ್ರ ಭೂಸಾರಿಗೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ಅವರಿಗೆ ಮನವಿ ನೀಡಲಾಗಿದೆ. ಆದರೆ, ಅರ್ಜಿದಾರರ ಮನವಿಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅದಕ್ಕೆ ಪ್ರತಿಯಾಗಿ ಮತ್ತೆ ಅರ್ಜಿಯನ್ನು ಸಲ್ಲಿಸುತ್ತಿದ್ದೇವೆ. ನಮ್ಮ ಮನವಿಯನ್ನು ಪರಿಗಣಿಸಲು ಸೂಚನೆ ನೀಡಿಬೇಕು ಎಂದು ಅರ್ಜಿಯಲ್ಲಿ ಕೇಳಿಕೊಳ್ಳಲಾಗಿತ್ತು.
ಅಲ್ಲದೆ, ಸೇತುವೆ ನಿರ್ಮಾಣಕ್ಕೆ ಮೂಲ ಕಾರಣರಾದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಿದ್ದಾರೆ. ಅವರಿಂದಲೇ ಈ ಸೇತುವೆ ತಲೆ ಎತ್ತಿದೆ, ಇದರ ಹಿಂದೆ ಅವರ ಶ್ರಮ ಸಾಕಷ್ಟಿದೆ ಎಂದು ತಿಳಿಸಲಾಗಿದೆ. ಇನ್ನೂ ಅರ್ಜಿದಾರರ ಮನವಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸ್ಥಳೀಯರ ಭಾವನೆ ಮತ್ತು ಸಾರ್ವಜನಿಕರ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಮುಖ್ಯವಾಗಿ ಅರ್ಜಿದಾರರು ಮನವಿ ಸಲ್ಲಿಸಿದ ಕೆಲ ದಿನಗಳಲ್ಲಿಯೇ ಸೇತುವೆ ಉದ್ಘಾಟನೆ ಕಾರ್ಯಕ್ರಮ ನಡೆಸಲಾಗಿದೆ. ಹೀಗಾಗಿ ಸೇತುವೆ ಉದ್ಘಾಟನೆಯಾದರೂ, ಅದಕ್ಕೆ ನಾಮಕರಣ ಮಾಡುವ ವಿಷಯವನ್ನು ಯಥಾಸ್ಥಿತಿಯಲ್ಲಿಡಬೇಕು ಎನ್ನುವಂತೆ ನಿರ್ದೇಶನ ಮಾಡುವಂತೆ ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಶಿವಮೊಗ್ಗದ ಸಂಸದರಾಗಿದ್ದ ವೇಳೆಯಲ್ಲಿ ಸಾಗರ ಮತ್ತು ಮರಕುಟಕ ಮಧ್ಯದ 62 ಕಿಲೋ ಮೀಟರ್ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಲು ಶ್ರಮಿಸಿದ್ದರು. ಈ ಮಾರ್ಗದಲ್ಲಿಯೇ ಕಳಸವಳ್ಳಿ – ಅಂಬಾರಗೋಡ್ಲು ಮಾರ್ಗದಲ್ಲಿ ಶರಾವತಿ ಹಿನ್ನೀರಿನ ಮೇಲೆ 525 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಅಲ್ಲದೆ ಇದೀಗ ದೇಶದ ಎರಡನೇ ದೊಡ್ಡ ಮೇಲ್ಸೇತುವೆ ಎನ್ನುವ ಹೆಸರು ಪಡೆದಿದೆ. ಈ ಸೇತುವೆಗೆ ಯಡಿಯೂರಪ್ಪ ಅವರ ಹೆಸರಿಡಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ ಎಂದು ಈ ಅರ್ಜಿಯ ಪರ ವಾದ ಮಂಡಿಸಿರುವ ಹಿರಿಯ ವಕೀಲ ದಿವಾಕರ್ ನ್ಯಾಯಾಯದ ಗಮನಕ್ಕೆ ತಂದಿದ್ದಾರೆ. ಆದರೆ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸುಮಾರು 424 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿಗಂದೂರು ಸೇತುವೆ 2.44 ಕಿ.ಮೀ ಉದ್ದವಿದ್ದು, 16 ಮೀಟರ್ ಅಗಲವಿದೆ. ಭಾರತದ 2ನೇ ಅತಿ ಉದ್ದದ ಕೇಬಲ್ ಸೇತುವೆ ಎಂಬ ಹಿರಿಮೆಗೂ ಪಾತ್ರವಾಗಿದೆ. ಜು.14ರಂದು ಈ ಸೇತುವೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೇ ಸಂಸದ ಬಿ.ವೈ. ರಾಘವೇಂದ್ರ ಅವರು ಈ ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿಯ ಹೆಸರಿಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ನಡುವೆ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಕೇಳಿ ಬರುತ್ತಿದೆ.