Monday, November 17, 2025

Latest Posts

RSS ಪಥಸಂಚಲನದಲ್ಲಿ ಪಾಲ್ಗೊಂಡ ಪಿಡಿಓ ಅಮಾನತುಗೆ ಕೆಎಸ್‌ಎಟಿ ತಡೆ !

- Advertisement -

ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತು ಮಾಡಲ್ಪಟ್ಟಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಗ್ರಾಮದ ಪಿಡಿಓ ಪ್ರವೀಣ್ ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಿಂದ ತಾತ್ಕಾಲಿಕ ತಡೆ ಸಿಕ್ಕಿದೆ. ಈ ಮೂಲಕ ರಾಜ್ಯ ಸರ್ಕಾರದ ಆದೇಶಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ.

RSS ಶತಮಾನೋತ್ಸವ ಅಂಗವಾಗಿ ಅಕ್ಟೋಬರ್ 12ರಂದು ಲಿಂಗಸುಗೂರಿನಲ್ಲಿ ಪಥಸಂಚಲನ ನಡೆದಿತ್ತು. ಅದರಲ್ಲಿ ಸಂಘದ ಸಮವಸ್ತ್ರದಲ್ಲಿ ಹಾಗೂ ದೊಣ್ಣೆ ಹಿಡಿದು ಗಣವೇಷಧಾರಿಯಾಗಿ ಪ್ರವೀಣ್ ಕುಮಾರ್ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳು 2021ರ ನಿಯಮ 3 ಉಲ್ಲಂಘನೆ ಆರೋಪದಡಿ, ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಅವರ ಆದೇಶದ ಮೇರೆಗೆ ಅವರನ್ನು ಅಮಾನತು ಮಾಡಲಾಗಿತ್ತು.

ಈ ಅಮಾನತು ಆದೇಶವನ್ನು ಪ್ರಶ್ನಿಸಿ, ಪಿಡಿಓ ಪರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾನೂನು ಹೋರಾಟ ಕೈಗೊಂಡಿದ್ದರು. ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡುತ್ತಾ, ಪ್ರವೀಣ್ ಕುಮಾರ್ ವಿರುದ್ಧ ಹೊರಡಿಸಿದ್ದ ಏಕಪಕ್ಷೀಯ ಅಮಾನತು ಆದೇಶವನ್ನು ನಾವು ಪ್ರಶ್ನಿಸಿದ್ದೆವು. ಈಗ ಅದಕ್ಕೆ KSAT ತಡೆ ನೀಡಿದೆ. ಯಾವುದೇ ರೀತಿಯ ಬೆದರಿಕೆ, ಆರ್‌ಎಸ್‌ಎಸ್‌ನ ರಾಷ್ಟ್ರ ನಿರ್ಮಾಣದ ಆದರ್ಶಗಳನ್ನು ತಡೆಯಲು ಸಾಧ್ಯವಿಲ್ಲ. ಈ ತೀರ್ಪು ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ ಎಂದು ತಿಳಿಸಿದ್ದಾರೆ.

ತೇಜಸ್ವಿ ಸೂರ್ಯ ಅವರು ಅಮಾನತು ನಂತರ ಪ್ರವೀಣ್ ಅವರನ್ನು ಭೇಟಿ ಮಾಡಿ, ಕಾನೂನುಬಾಹಿರ ಮತ್ತು ಅಕ್ರಮ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವುದಾಗಿ ಭರವಸೆ ನೀಡಿದ್ದರು. ಹೈಕೋರ್ಟ್‌ನ ಅನೇಕ ತೀರ್ಪುಗಳಲ್ಲಿ ಸರ್ಕಾರಿ ನೌಕರರಿಗೂ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಹಕ್ಕು ಇದೆ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದರು.

ಅಂದಿನ ಮಾತಿನಂತೆ ಸಂಸದ ತೇಜಸ್ವಿ ಸೂರ್ಯ ಕಾನೂನು ಹೋರಾಟದಲ್ಲಿ ಪಿಡಿಓಗೆ ನೆರವಾಗಿದ್ದು, ಈಗ KSAT ನೀಡಿದ ತಡೆಯಿಂದ ಸರ್ಕಾರದ ನಿರ್ಧಾರಕ್ಕೆ ಬೃಹತ್ ಹಿನ್ನಡೆಯಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss