Friday, July 11, 2025

Latest Posts

ಆಟೋ, ಕಾರು ಚಾಲಕರೇ ಎಚ್ಚರ! : ಹೃದಯಾಘಾತದ ಸಂಪೂರ್ಣ ಮಾಹಿತಿ ಬಹಿರಂಗ

- Advertisement -

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿದೆ. ಇದಕ್ಕೆ ನಿಜವಾದ ಕಾರಣಗಳನ್ನು ತಿಳಿಯಲು ತಾಂತ್ರಿಕ ಸಮಿತಿ ಸದಸ್ಯರ ತಂಡವನ್ನು ರಚಿಸಲಾಗಿತ್ತು. ಇದೀಗ ಆ ವರದಿಯನ್ನು ಸಿದ್ಧಪಡಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಲ್ಲಿಸಿದ್ದಾರೆ. ವರದಿ ಸಲ್ಲಿಕೆ ಬಳಿಕ ಸಚಿವ ದಿನೇಶ್​ ಗುಂಡುರಾವ್​ ತಾಂತ್ರಿಕ ಸಮಿತಿ ಸದಸ್ಯರ ಜೊತೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಹಾಸನದಲ್ಲಿ ಜನರು ಹೃದಯಾಘಾತದಿಂದ ಸಾವಿಗೀಡಾಗಿರುವುದಕ್ಕೆ ಕಾರಣ ಮಧುಮೇಹ, ಮದ್ಯಪಾನ ಮತ್ತು ಕುಟುಂಬದ ಹಿನ್ನೆಲೆ ಅಂತ ವರದಿ ಮೂಲಕ ತಿಳಿದುಬಂದಿದೆ ಎಂದು ಹೇಳಿದರು.

ಮೇ ಮತ್ತು ಜೂನ್ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ 24 ಮಂದಿ ಮೃತಪಟ್ಟಿದ್ದರು. ತಜ್ಞರು ನೀಡಿದ ಅಧ್ಯಯನ ವರದಿಯಲ್ಲಿ ನಾಲ್ವರು ಹೃದಯ ಸ್ತಂಭನದಿಂದ ಮೃತಪಟ್ಟಿಲ್ಲವೆಂದು ಇದೆ. ಇನ್ನುಳಿದ 20 ಜನರಲ್ಲಿ 10 ಜನರು ಹೃದಯಕ್ಕೆ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. 10 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತಪಟ್ಟ 20 ಜನರಲ್ಲಿ 15 ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಹಾಸನದಲ್ಲಿ ಹೃದಯಾಘಾತ ಹೆಚ್ಚಾಗ್ತಿದೆಯಾ ಎಂಬ ಆತಂಕ ಇತ್ತು. 2024ರಲ್ಲಿ ಹೃದಯಾಘಾತದಿಂದ 24 ಜನರು ಮೃತಪಟ್ಟಿದ್ದಾರೆ. ಈ ವರ್ಷ 20 ಜನರ ಸಾವಾಗಿದೆ, ಆತಂಕ ಪಡುವ ಸಂಗತಿ ಇಲ್ಲ. ಚಿಕ್ಕ ವಯಸ್ಸಿನವರಿಗೆ ಹೃದಯಾಘಾತವಾಗುತ್ತಿದ್ದು ಗಂಭೀರ ವಿಚಾರವಾಗಿದೆ. ಚಿಕ್ಕ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದಕ್ಕೆ ಅತಿಯಾದ ಬೊಜ್ಜು ಕಾರಣ ಎಂಬುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

ಚಾಲಕರೇ ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದು ಆಟೋ, ಕ್ಯಾಬ್ ಚಾಲಕರ ಬಗ್ಗೆ ಹೆಚ್ಚು ಗಮನಹರಿಸುತ್ತೇವೆ. ಆಟೋ, ಕ್ಯಾಬ್ ಚಾಲಕರಿಗೆ ಪ್ರತ್ಯೇಕ ತಪಾಸಣೆ ಮಾಡಿಸಲು ಸಲಹೆ ನೀಡುತ್ತೇನೆ. ಸ್ಕ್ರೀನಿಂಗ್ ಮಾಡಿಸಲು ಚಾಲಕರ ಸಂಘದ ಜತೆ ಮಾತುಕತೆ ಮಾಡುತ್ತೇವೆ. ಮೃತಪಟ್ಟ ಬಹುತೇಕರಲ್ಲಿ‌ ಧೂಮಪಾನ ಹಾಗೂ ಮದ್ಯಪಾನದ ಅಭ್ಯಾಸ ಇತ್ತು. ಸಮುದಾಯ ಪ್ರಾಥಮಿಕ ಕೇಂದ್ರದಲ್ಲಿ ಇಸಿಜಿ ವ್ಯವಸ್ಥೆ ಮಾಡುತ್ತೇವೆ. ಹೃದಯಾಘಾತಕ್ಕೂ ಕೊರೋನಾಗೂ ಸಂಬಂಧ ಇಲ್ಲವೆಂದು ಹೇಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss