ಮೈಸೂರು : ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವದ ಹಗ್ಗ-ಜಗ್ಗಾಟ ನಡೆಯುತ್ತಿರುವಾಗಲೇ ಇದೀಗ ಡಿಕೆ ಶಿವಕುಮಾರ್ ಪರ ಜೆಡಿಎಸ್ ಶಾಸಕರೊಬ್ಬರು ಧ್ವನಿ ಎತ್ತಿದ್ದಾರೆ. ಒಕ್ಕಲಿಗರು ಸಿಎಂ ಆಗಬೇಕೆಂದು ಹೇಳುವ ಮೂಲಕ ಜಾತಿಯ ಕಾರ್ಡ್ ಪ್ಲೇ ಮಾಡಿರುವುದು ರಾಜಕಾರಣದಲ್ಲಿ ಇನ್ನಷ್ಟು ಕಿಚ್ಚು ಹೊತ್ತಿಕೊಳ್ಳುವಂತೆ ಮಾಡಿದೆ.
ಇನ್ನೂ ಮುಖ್ಯಮಂತ್ರಿಯಾಗಲು ಡಿಕೆ ಶಿವಕುಮಾರ್ ಅವರಿಗೆ ಇದೇ ಕೊನೆಯ ಅವಕಾಶವಾಗಿದೆ. ಇನ್ನು ಮುಂದಿನ ಅವಧಿಯಲ್ಲಿ ಸಿಎಂ ಆಗುತ್ತೇನೆಂದರೆ ಅದು ಆಗುವುದಿಲ್ಲ ಎಂದು ಜೆಡಿಎಸ್ ಶಾಸಕ ಎ. ಮಂಜು ಹೇಳಿರುವುದು ಸಿದ್ದು ಟೀಂನ ಎಲ್ಲ ಲೆಕ್ಕಾಚಾರಗಳು ತಲೆ ಕೆಳಗಾಗುವಂತೆ ಮಾಡಿದೆ.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದವಾಗಿದ್ದರೆ. ಅದರ ಪ್ರಕಾರ ಸಿದ್ದರಾಮಯ್ಯ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಂದ ಯಾವುದೇ ತೀರ್ಮಾನ ಆಗುವುದಿಲ್ಲ. ಬದಲಿಗೆ ಹೈಕಮಾಂಡ್ ಇದರ ಬಗ್ಗೆ ನಿರ್ಧಾರ ಪಡೆಯುತ್ತದೆ ಎಂದು ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ಯಾರೇ ಮುಖ್ಯಮಂತ್ರಿಗಳಾದರೂ ಬಿಜೆಪಿ ಹಾಗೂ ಜೆಡಿಎಸ್ನವರಿಗೆ ಸಮಸ್ಯೆ ಆಗುವುದಿಲ್ಲ. ರಾತ್ರಿ 12 ಗಂಟೆಗೆ ಹುಟ್ಟಿರುವ ಕಾಂಗ್ರೆಸ್ ಪಕ್ಷದಲ್ಲಿ, ರಾತೋರಾತ್ರಿಯೇ ಏನಾದರೂ ಬದಲಾವಣೆಗಳು ನಡೆಯಬಹುದು ಎಂದು ಟೀಕಿಸಿದ್ದಾರೆ. ಇನ್ನೂ ಪ್ರಮುಖವಾಗಿ ಡಿಕೆ ಶಿವಕುಮಾರ್ ಅವರ ಕಾರಣಕ್ಕಾಗಿಯೇ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಹೀಗಾಗಿ 30 ರಿಂದ 40 ಸ್ಥಾನಗಳು ಕಾಂಗ್ರೆಸ್ಗೆ ಹೆಚ್ಚಳವಾಗಿವೆ. ಆದರೆ ಇವರನ್ನು ನಂಬಿ ನಾವು ಮೋಸ ಹೋದೆವು ಎಂಬುವುದು ಜನರಿಗೆ ಈಗ ಅರ್ಥವಾಗುತ್ತಿದೆ ಎಂದು ಕೈ ವಿರುದ್ಧ ಕಿಡಿ ಕಾರಿದ್ದಾರೆ.
ಕಳೆದ 2013ರಲ್ಲಿ ಅಧಿಕಾರದಲ್ಲಿದ್ದಂತೆ ಸಿದ್ದರಾಮಯ್ಯ ಈಗಿಲ್ಲ, ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ. ಈಗ ರಾಜ್ಯದ ಮುಖ್ಯಮಂತ್ರಿ ನಾನೇ ಎಂದು ಅವರು ಪದೇ ಪದೇ ಯಾಕೆ ಹೇಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಕ್ಕೆ ಹಣವಿಲ್ಲ, ಇದನ್ನು ಮರೆಮಾಚುವ ಉದ್ದೇಶದಿಂದ ಈ ಗೊಂದಲಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಒಂದು ಮನೆ ಅಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತವೆ. ಈಗ ಜಿ.ಟಿ. ದೇವೇಗೌಡರು ನಮ್ಮ ಪಕ್ಷದಲ್ಲಿದ್ದಾರೆ. ನಮ್ಮಲ್ಲಿ ಯಾವ ಸಮಸ್ಯೆಗಳೂ ಇಲ್ಲ. ಚುನಾವಣೆಯ ವೇಳೆ ನಾವೆಲ್ಲ ಒಂದಾಗಿ ಎದುರಿಸುತ್ತೇವೆ. ಯಾವುದೇ ಅಸಮಾಧಾನಗಳು ಇಲ್ಲ. ಅವರೊಂದಿಗೆ ಮಾತನಾಡುತ್ತೇವೆ ಎಂದು ಎಂ. ಮಂಜು ಹೇಳಿದ್ದಾರೆ. ಜೆಡಿಎಸ್ ಶಾಸಕ ಎ. ಮಂಜು ಅವರ ಈ ಹೇಳಿಕೆಯು ಕಾಂಗ್ರೆಸ್ ಪಕ್ಷದಲ್ಲಿ ಬಾರೀ ಬಿರುಗಾಳಿಯನ್ನು ಎಬ್ಬಿಸುವ ಸಾಧ್ಯತೆ ಇದೆ. ಚುನಾವಣೆಯ ಸಮಯದಲ್ಲಿ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆಯನ್ನು ವಿಪಕ್ಷ ಶಾಸಕ ನೆನಪಿಸಿರುವುದು ಕೈ ಪಾಳಯದಲ್ಲಿ ಇನ್ನಷ್ಟು ಕಂಪನಕ್ಕೆ ಕಾರಣವಾಗಲಿದೆ. ಜಾತಿಯ ಕಾರ್ಡ್ ಪ್ಲೇ ಮಾಡಿರುವ ಶಾಸಕನ ಮಾತನಿಂದ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿಕೊಂಡಂತಾಗಿದೆ.