ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ಜೋರಾಗಿದ್ದವು. ಶಾಸಕರು, ಸಚಿವರು ಸೇರಿದಂತೆ ಕೈ ಪಾಳಯದಲ್ಲಿ ಈ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು. ಕೆಲ ದಿನಗಳ ಹಿಂದಷ್ಟೇ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದಿದ್ದ ವಿಶೇಷ ಸಚಿವ ಸಂಪುಟ ಸಭೆಯ ವೇಳೆಯೂ ಸಿಎಂ ಸಿದ್ದರಾಮಯ್ಯ ನಾನೇ ಐದು ವರ್ಷ ಅಧಿಕಾರ ನಡೆಸುತ್ತೇನೆ ಎಂದು ಹೇಳಿದ್ದರು.
ಈ ಬಳಿಕ ಸಿದ್ದರಾಮಯ್ಯ ಅವರನ್ನೇ ತಮ್ಮ ನಾಯಕ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ನನ್ನ ಬಳಿ ಆಯ್ಕೆಗಳಿಲ್ಲ, ಅವರ ನಾಯಕತ್ವ ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ಈ ಮೂಲಕ ನಮ್ಮಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಿಕೊಳ್ಳುವ ಪ್ರಯತ್ನ ಮಾಡಿದ್ದರು.
ಇನ್ನೂ ದೆಹಲಿಗೆ ಭೇಟಿ ನೀಡಿದ್ದ ವೇಳೆ ಗುರುವಾರವಷ್ಟೇ ಹೈಕಮಾಂಡ್ ಭೇಟಿಗೂ ಮುನ್ನವೇ ದಿಡೀರ್ ಆಗಿ ಮಾಧ್ಯಮಗಳೆದುರು ಬಂದು ನಾನೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ. ಅಲ್ಲದೆ ನನ್ನ ನಾಯಕತ್ವದಲ್ಲಿಯೇ ಮುಂಬರುವ ಚುನಾವಣೆ ಎನ್ನುವ ಮೂಲಕ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಹಾಗೂ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿರುವ ಶಾಸಕರಿಗೂ ಖಡಕ್ ಸಂದೇಶ ರವಾನಿಸಿದ್ದಾರೆ. ಅಲ್ಲದೆ ನನಗೆ ಹೆಚ್ಚಿನ ಶಾಸಕರ ಬೆಂಬಲವಿದೆ. ಹೀಗಾಗಿ ನಾನು ಸಿಎಂ ಆಗಿದ್ದೇನೆ, ಡಿಕೆ ಶಿವಕುಮಾರ್ ಅವರಿಗೆ ಕಡಿಮೆ ಬೆಂಬಲವಿತ್ತು ಎಂದು ಸಿದ್ದರಾಮಯ್ಯ ಕುಟುಕಿದ್ದರು.
ಆದರೆ ಎರಡು ಬಾರಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಇದೀಗ ಮೂರನೇ ಬಾರಿಗೆ ತಮ್ಮ ಟ್ವೀಟ್ಟರ್ ಪೋಸ್ಟ್ ಮೂಲಕ ನಾನೇ ಐದು ವರ್ಷ ಸಿಎಂ ಆಗಿ ಅಧಿಕಾರ ನಡೆಸುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂಬುದು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಪಕ್ಷದೊಳಗೆ ಅಂತಹ ಒಪ್ಪಂದವಾಗಲೀ, ಚರ್ಚೆಗಳಾಗಲೀ ಯಾವುದೂ ನಡೆಯುತ್ತಿಲ್ಲ. ಐದೂ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಈ ಬಗ್ಗೆ ಈಗಾಗಲೇ ನಮ್ಮ ಹೈಕಮಾಂಡ್, ರಣದೀಪ್ ಸಿಂಗ್ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲರೂ ಸ್ಪಷ್ಟನೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ನಾಯಕತ್ವದ ಕುರಿತು ಚರ್ಚೆಗಳಿಗೆ ಮತ್ತೊಮ್ಮೆ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ.