ಪತ್ನಿಯಿಂದ ದೂರವಾದ ಖುಷಿಯಲ್ಲಿ 40 ಲೀಟರ್ ಹಾಲಿನಿಂದ ಸ್ನಾನ ಮಾಡಿದ್ದಾನೆ ಈ ವ್ಯಕ್ತಿ. ಹೌದು ಈ ಅಪರೂಪದ ಘಟನೆ ನಡೆದಿದ್ದು ಅಸ್ಸಾಂನಲ್ಲಿ. ಈತನ ಹೆಸರು ಮಾಣಿಕ್ ಅಲಿ. ಈತ ತನ್ನ ಹೆಂಡತಿಯಿಂದ ವಿಚ್ಛೇದನೆ ಮಾಡಿಕೊಂಡ ಕೂಡಲೇ, ತನ್ನ ಫ್ರೀಡಮ್‌ಗೆ ಸಂಭ್ರಮ ವ್ಯಕ್ತಪಡಿಸೋಕೆ ಬಕೆಟ್‌ಗಟ್ಟಲೆ ಹಾಲನ್ನು ತನ್ನ ಮೈಮೇಲೆ ಸುರಿದುಕೊಂಡಿದ್ದಾನೆ!
ಈ ಘಟನೆ ಅಸ್ಸಾಂ ರಾಜ್ಯದ ಗ್ರಾಮಾಂತರ ಪ್ರದೇಶವೊಂದರಲ್ಲಿ ನಡೆದಿದ್ದು, ಸ್ಥಳೀಯರು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಾಣಿಕ್ ಅಲಿ, ಹೆಸರು ಕೇಳಿದರೆ ಸರಿ ಸರಳ ವ್ಯಕ್ತಿಯೇನೋ ಅನಿಸಬಹುದು. ಆದರೆ ಇವನ ವೈವಾಹಿಕ ಬದುಕು ಮಾತ್ರ ಅಷ್ಟೊಂದು ಸರಳವಾಗಿರಲಿಲ್ಲ.
ಈತ ಈ ಹಿಂದೆ ಮದುವೆಯಾಗಿ ಮಗಳು ಕೂಡ ಇದ್ದಾಳೆ. ಆದರೆ ಮಾಣಿಕ್‌ನ ಪತ್ನಿಗೆ ಯಾರೊ ಲವ್ವರ್ ಇದ್ದನಂತೆ. ಈ ವಿಚಾರ ಮಾಣಿಕ್‌ಗೇ ತಿಳಿದಿದ್ದರೂ, ಕುಟುಂಬದ ಮಾನ, ಮಗಳ ಭವಿಷ್ಯಕ್ಕಾಗಿ ಈತ ಆಕೆಯನ್ನು ಕ್ಷಮಿಸುತ್ತಾ ಬಂದಿದ್ದ.
ಆಕೆ ಹಿಂದೆ ಎರಡು ಬಾರಿ ಲವ್ವರ್ ಜೊತೆ ಓಡಿಹೋಗಿದ್ದಳು ಅಂತ ಮಾಣಿಕ್ ಹೇಳಿದ್ದಾರೆ. ಕೊನೆಗೆ ಇನ್ನು ಸಾಧ್ಯವಿಲ್ಲ, ಇವತ್ತು ಫೈನಲ್ ಅಂತ ಇಬ್ಬರೂ ಒಪ್ಪಿಗೆ ನೀಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ರು. ಬಳಿಕ ವಿಚ್ಛೇದನ ಮಂಜೂರಾದ ಬಳಿಕ, ಈತ ಮನೆಯಿಂದ ಹೊರಬಂದು ನನಗೆ ಇವತ್ತಿನಿಂದ ಸ್ವತಂತ್ರ… ನನಗೆ ಫ್ರೀಡಂ ಸಿಕ್ತು… ಅಬ್ಬಾ ನನ್ನ ಹೆಂಡತಿ ಹೋದಳು…!ಎಂದು ಕೂಗುತ್ತ, ಬಕೆಟ್‌ಗಟ್ಟಲೆ ಹಾಲನ್ನ ತನ್ನ ಮೈಮೇಲೆ ಸುರಿದುಕೊಂಡಿದ್ದಾನೆ.
ಇದನ್ನ ಯಾರೋ ವೀಡಿಯೋ ಮಾಡಿದ್ದು, ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದಹಾಗೆ, ವರದಿಗಳ ಪ್ರಕಾರ, ಈತ 40 ಲೀಟರ್ ಹಾಲು ಬಳಸಿ ಸ್ನಾನ ಮಾಡಿದ್ದಾನೆ ಎಂಬ ಮಾಹಿತಿ ಇದೆ.