ಬೆಂಗಳೂರು : ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಬಿಹಾರದಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿಯುವುದಕ್ಕಾಗಿ ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿವೆ. ಮತದಾರರನ್ನು ತಮ್ಮತ್ತ ಸೆಳೆಯವ ನಿಟ್ಟನಲ್ಲಿ ಒಂದೊಂದಾಗಿ ಗ್ಯಾರಂಟಿಗಳನ್ನು ಘೋಷಿಸುತ್ತಿವೆ. ಕಳೆದ ಕೆಲ ದಿನಗಳ ಹಿಂದಷ್ಟೇ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 35ರಷ್ಟು ಮೀಸಲಾತಿಯನ್ನು ನಿತೀಶ್ ಕುಮಾರ್ ಸರ್ಕಾರ ಘೋಷಿಸಿತ್ತು. ಅದೇ ರೀತಿಯಾದ ಇನ್ನೊಂದು ಗುಡ್ ನ್ಯೂಸ್ ಅನ್ನು ರಾಜ್ಯದ ಜನರಿಗೆ ನೀಡಿದ್ದು, ಪ್ರತಿ ತಿಂಗಳು 125 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದು ಖುದ್ದು ಸಿಎಂ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿರುವ ಅವರು, ನಾವು ಮೊದಲಿನಿಂದಲೂ ಎಲ್ಲರಿಗೂ ಕೈಗೆಟುಕುವ ದರದಲ್ಲಿ ವಿದ್ಯುತ್ ನೀಡುತ್ತಿದ್ದೇವೆ. ಇದೀಗ, 2025ರ ಆಗಸ್ಟ್ 1ರಿಂದ ಜುಲೈ ತಿಂಗಳ ಬಿಲ್ನಿಂದಲೇ ರಾಜ್ಯದ ಎಲ್ಲಾ ಗೃಹಬಳಕೆದಾರರು 125 ಯೂನಿಟ್‌ಗಳವರೆಗಿನ ವಿದ್ಯುತ್ ಅನ್ನು ಯಾವುದೇ ಹಣ ಪಾವತಿ ಮಾಡದೆ ಬಳಸಬಹುದಾಗಿದೆ. ಇದು ರಾಜ್ಯದ 1 ಕೋಟಿ 67 ಲಕ್ಷ ಕುಟುಂಬಗಳಿಗೆ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ಗೃಹ ಬಳಕೆ ಗ್ರಾಹಕರ ಒಪ್ಪಿಗೆ ಪಡೆದು, ಅವರ ಮನೆಗಳ ಮೇಲ್ಛಾವಣಿಗಳ ಮೇಲೆ ಸೌರಶಕ್ತಿ ಉಪಕರಣಗಳನ್ನು ಅಳವಡಿಸಲು, ಅಥವಾ ಹತ್ತಿರದ ಸಾರ್ವಜನಿಕ ಸ್ಥಳಗಳಲ್ಲಿ ಸೌರವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ರಾಜ್ಯದ ಜನರಿಗೆ ವಿದ್ಯುತ್ ಒದಗಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ನಿತೀಶ ಹೇಳಿದ್ದಾರೆ.
ಪ್ರಮುಖವಾಗಿ ಕುಟೀರ ಜ್ಯೋತಿ ಯೋಜನೆಯ ಹೆಸರಿನಲ್ಲಿ 10,000 ಮೆಗಾವ್ಯಾಟ್ ಸೌರಶಕ್ತಿ ಉತ್ಪಾದನೆ ಮಾಡುವ ವಿಶೇಷ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ಸೋಲಾರ್ ಅಳವಡಿಕೆಯ ಎಲ್ಲಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಈ ಯೋಜನೆ ಅಡಿಯಲ್ಲಿ ಮುಖ್ಯವಾಗಿ ಬಡತನದ ಕುಟುಂಬಗಳಿಗೆ ಈ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ ಇತರ ಕುಟುಂಬಗಳಿಗೆ ಅಗತ್ಯ ಸೌಲಭ್ಯ ನೀಡುವುದರ ಜೊತೆಗೆ ವಿದ್ಯುತ್ ಖರ್ಚನ್ನು ದೂರ ಮಾಡುವ ಕೆಲಸವನ್ನು ಮಾಡುತ್ತೇವೆ. ಈ ಯೋಜನೆಯು 125 ಯುನಿಟ್ನ ಉಚಿತ ವಿದ್ಯುತ್ ನೀಡುವ ಜೊತೆಗೆ, ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 10,000 ಮೆಗಾವ್ಯಾಟ್ ಸೌರಶಕ್ತಿ ಉತ್ಪಾದನೆಯ ಗುರಿಯನ್ನೂ ಹೊಂದಿದೆ ಎಂದು ಸಿಎಂ ನಿತೀಶ್ ಕುಮಾರ್ ವಿವರಿಸಿದ್ದಾರೆ. ಇನ್ನೂ ಗಮನಾರ್ಹ ಸಂಗತಿ ಏನೆಂದರೆ ನಿತೀಶ್ ಕುಮಾರ್ ಈ ಉಚಿತ ಕೊಡುಗೆಗಳು, ಗ್ಯಾರಂಟಿಗಳ ಕಡು ವಿರೋಧಿಯಾಗಿದ್ದರು. ಆದರೆ ಮತದಾರರನ್ನು ಸೆಳೆಯಲು ಏಕಾ ಏಕಿ ಹೀಗೆ ಉಚಿತ ಯೋಜನೆಗಳನ್ನು ಘೋಷಣೆ ಮಾಡಿರುವ ಅವರ ನಡೆಯು ವಿಪಕ್ಷಗಳಿಗೆ ಆಹಾರವಾದಂತೆ ಕಂಡುಬರುತ್ತಿದೆ.