ನಮ್ಮ ಮೆಟ್ರೋ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಮೆಟ್ರೋ ಪ್ರಯಾಣಿಕರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಒದಗಿಸುವ ಉದ್ದೇಶದಿಂದ BMRCL ಈ ಕ್ರಮಕ್ಕೆ ಮುಂದಾಗಿದೆ.
ಅತ್ಯಂತ ಆಧುನಿಕ ತಂತ್ರಜ್ಞಾನದ ಮೂಲಕ, ನಮ್ಮ ಮೆಟ್ರೋ ದ ಸುರಂಗ ಮಾರ್ಗಗಳಲ್ಲಿ ಕಂಡುಬರುತ್ತಿದ್ದ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗಳಿಗೆ ಪರಿಹಾರ ಕಾಣಲು BMRCL ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ IBS (In-Building Solutions), BTS ಸೆಲ್ಯುಲರ್ ಟವರ್ ಹಾಗೂ ಪೋಲ್‌ಗಳ ಮೂಲಕ 4G ಹಾಗೂ 5G ಸೇವೆ ಒದಗಿಸುವ ಉದ್ದೇಶದಿಂದ Wi-Fi ಅಳವಡಿಕೆಗೆ ಮುಂದಾಗಿದೆ.
ಈ ಯೋಜನೆಗೆ ಅನುಗುಣವಾಗಿ, BMRCL ಇದೀಗ ಅಡ್ವಾನ್ಸ್ಡ್ ಕಮ್ಯುನಿಕೇಷನ್ ಅಂಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಇಂಡಿಯಾ Pvt. Ltd ಸಂಸ್ಥೆಯೊಂದಿಗೆ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅವಧಿ 13 ವರ್ಷಗಳಿದ್ದು, ಇದು ಸಂಪೂರ್ಣ ಪರವಾನಗಿ ಆಧಾರಿತ ಒಪ್ಪಂದವಾಗಿದೆ. ಈ ಒಪ್ಪಂದಕ್ಕೆ BMRCL ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್ ಹಾಗೂ ACES ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಎನ್. ಮಝರ್ ಸಹಿ ಹಾಕಿದ್ದಾರೆ.
ಈ ಹೊಸ ವ್ಯವಸ್ಥೆಯ ಮೂಲಕ, ಮೆಟ್ರೋ ಪ್ರಯಾಣಿಕರಿಗೆ ನಿರಂತರ ಹಾಗೂ ಸುಗಮವಾದ ಮೊಬೈಲ್ ಸಂಪರ್ಕ ಲಭ್ಯವಾಗಲಿದೆ. ವಿಶೇಷವಾಗಿ ಭೂಗತ ಮಾರ್ಗವಿರುವ ಡೈರಿ ವೃತ್ತದಿಂದ ನಾಗವಾರದವರೆಗೆ 12 ನಿಲ್ದಾಣಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.. ಈ ಮಾರ್ಗದಲ್ಲಿ ಈಗಾಗಲೇ ಪ್ರಯಾಣ ಮಾಡುವವರಿಗೆ ಮೊಬೈಲ್ ನೆಟ್ವರ್ಕ್ ಕಡಿತ, ಡ್ರಾಪ್ ಕಾಲ್ ಸಮಸ್ಯೆಗಳು ಎದುರಾಗುತ್ತಿದ್ದು, ಈ ಯೋಜನೆಯ ನಂತರ ಇಂತಹ ತೊಂದರೆಗಳು ನಿವಾರಣೆಯಾಗಲಿವೆ.
ಈ ಯೋಜನೆಯಿಂದ ಬಿಎಂಆರ್‌ಸಿಎಲ್‌ಗೆ ನಿಖರ ಆದಾಯವೂ ಲಭ್ಯವಾಗಲಿದೆ. Wi-Fi ಸೇವೆಗಾಗಿ ವಿಧಿಸಲಾಗುವ ಶುಲ್ಕದ ರೂಪದಲ್ಲಿ ಬಿಎಂಆರ್‌ಸಿಎಲ್‌ಗೆ ವ್ಯವಹಾರಿಕ ಆದಾಯ ಸಿಗಲಿದೆ. ಈ ರೀತಿಯಲ್ಲಿ, ಪ್ರಯಾಣ ದರದ ಹೊರತಾಗಿ ಸಂಸ್ಥೆಗೆ ಮೌಲ್ಯವರ್ಧಿತ ಆದಾಯವೂ ಸಿಗಲಿದೆ, ಇದು ಮುಂದಿನ ಸೌಲಭ್ಯಾಭಿವೃದ್ದಿಗೆ ಸಹಕಾರಿ ಆಗಲಿದೆ.
ವರದಿ : ಲಾವಣ್ಯ ಅನಿಗೋಳ