ಸಿಎಂ ಸಿದ್ದರಾಮಯ್ಯ ಅವರಿಂದ ಸಾರ್ವಜನಿಕವಾಗಿ ಅವಮಾನಗೊಂಡ ನಂತರ ಸ್ವಯಂ ನಿವೃತ್ತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದ ಧಾರವಾಡ ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ, ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಹೌದು ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದ ಬೆಳಗಾವಿಯ ಕಾರ್ಯಕ್ರಮವೊಂದರಲ್ಲಿ, ಭದ್ರತಾ ವೈಫಲ್ಯಕ್ಕೆ ಕೋಪಗೊಂಡ ಸಿಎಂ, ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಅವರತ್ತ ಕೈ ಎತ್ತಿದ್ದ ಘಟನೆ ಎಲ್ಲರ ಗಮನ ಸೆಳೆದಿತ್ತು.ಏಯ್.. ಯಾರಿಲ್ಲಿ ಎಸ್‌ಪಿ? ಬಾರಯ್ಯ ಇಲ್ಲಿ ಎಂದು ವೇದಿಕೆ ಮೇಲೆ ಕರೆದು ನಾರಾಯಣ ಭರಮನಿ ಅವರ ಮೇಲೆ ಕೈ ಎತ್ತಿದ್ದರು
ಈ ಅವಮಾನದಿಂದ ಬೇಸತ್ತು, ಬರಮನಿ ಅವರು ರಾಜೀನಾಮೆಗೆ ಸಿದ್ಧತೆ ಮಾಡಿಕೊಂಡು, ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಆಕ್ರೋಶ, ಪೊಲೀಸ್ ಇಲಾಖೆ ಒಳಗಡೆಯ ಆತಂಕ, ಎಲ್ಲದರ ಫಲವಾಗಿ ಸರ್ಕಾರ ತಕ್ಷಣ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಯಿತು.
ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ ಬರಮನಿ ಅವರನ್ನು ಮನವೊಲಿಸಲು ಹರಸಾಹಸ ಪಟ್ಟರು. ಕೊನೆಗೆ ಅವರು ತಮ್ಮ ರಾಜೀನಾಮೆ ತಿರಸ್ಕರಿಸಿದ್ದರು. ಇದೀಗ ಎಲ್ಲರನ್ನೂ ಅಚ್ಚರಿಗೊಳಿಸುವಂತೆ, ನಾರಾಯಣ ಬರಮನಿ ಅವರಿಗೆ ಸರಕಾರ ಹೊಸ ಹುದ್ದೆಯನ್ನೇ ಕೊಟ್ಟಿದೆ. ಧಾರವಾಡ ಎಎಸ್ಪಿಯಿಂದ ನೇರವಾಗಿ ಬೆಳಗಾವಿಯ ಕಾನೂನು ಸುವ್ಯವಸ್ಥೆಯ ಡಿಸಿಪಿಯಾಗಿ ಅವರ ವರ್ಗಾವಣೆಯಾಗಿದೆ.
ಇದರಿಂದ ಮುಜುರಕ್ಕೊಳಗಾಗಿದ್ದ ರಾಜ್ಯ ಸರ್ಕಾರ, ಬರಮನಿ ಅವರಿಗೆ ಮುಂಬಡ್ತಿ ಹುದ್ದೆ ಆಫರ್ ನೀಡಿ ಮನವೊಲಿಸಿತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ವರದಿ : ಲಾವಣ್ಯ ಅನಿಗೋಳ