ಬೆಂಗಳೂರು : ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಭೂಮಿ ಒತ್ತುವರಿ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಕರ್ನಾಟಕ ಲೋಕಾಯುಕ್ತದಲ್ಲಿ ಕಳೆದ 2011ರಲ್ಲಿ ಸಲ್ಲಿಸಲಾಗಿದ್ದ ದೂರಿನಿಂದ ಪ್ರಾರಂಭವಾಗಿದ್ದ ದೀರ್ಘಕಾಲದ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಕೇಸ್ ಅನ್ನು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹೀರೇಮಠ್ ದಾಖಲಿಸಿದ್ದರು.
ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠವು ಮುಂದಿನ ಆದೇಶದವರೆಗೂ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಇನ್ನೂ ಪ್ರಾರಂಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಕೂಡ ಈ ಪ್ರಕರಣದಲ್ಲಿ ಪಾರ್ಟಿಯಾಗಿದ್ದರು. ಬಳಿಕ ಹೈಕೋರ್ಟ್, ಕುಮಾರಸ್ವಾಮಿ ಅವರ ಹೆಸರನ್ನು ಕೈಬಿಟ್ಟಿತ್ತು.
ಕಳೆದ 2020ರಲ್ಲಿ ಹೈಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ನಲ್ಲಿ ಸಮಾಜ ಪರಿವರ್ತನಾ ಸಮುದಾಯವು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಅಲ್ಲದೆ ಅರ್ಜಿಯ ವಿಚಾರಣೆಯಲ್ಲಿ ಕುಮಾರಸ್ವಾಮಿಯವರಿಗೆ ಅವಕಾಶ ನೀಡಲಾಗಿತ್ತು. ನ್ಯಾಯಾಂಗ ನಿಂದನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇರುವುದರಿಂದ ತಮ್ಮ ವಿರುದ್ಧದ ಕಾನೂನು ಪ್ರಕ್ರಿಯೆಗೆ ತಡೆ ನೀಡುವಂತೆ ಕುಮಾರಸ್ವಾಮಿ ಹೈಕೋರ್ಟ್ಗೆ ಮನವಿ ಮಾಡಿದ್ದರು. ಹೀಗಾಗಿ ಕಳೆದ ಮಾ.27ರವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು. ಇದೀಗ ಈ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿ ಆದೇಶಿಸಿದ್ದು ಕೇಂದ್ರ ಸಚಿವರಿಗೆ ಬಿಗ್ ರಿಲಿಫ್ ಸಿಕ್ಕಂತಾಗಿದೆ.