ನವದೆಹಲಿ : ಕಳೆದ 20 ವರ್ಷಗಳಿಂದ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅಲ್ ಸೌದ್ ನಿಧನರಾಗಿದ್ದಾರೆ. ಸ್ಲೀಪಿಂಗ್ ಪ್ರಿನ್ಸ್ ಎಂದೇ ಖ್ಯಾತಿಯಾಗಿದ್ದ ಅವರು ಪ್ರಿನ್ಸ್ ಅಲ್ ವಲೀದ್ ಸೌದಿ ರಾಜಮನೆತನದ ಹಿರಿಯ ಸದಸ್ಯರಾದ ಪ್ರಿನ್ಸ್ ಖಲೀದ್ ಬಿನ್ ತಲಾಲ್ ಅವರ ಪುತ್ರರಾಗಿದ್ದರು. ಅಲ್ಲದೆ ಬಿಲಿಯನೇರ್ ಪ್ರಿನ್ಸ್ ಅಲ್ ವಲೀದ್ ಬಿನ್ ತಲಾಲ್ ಅವರ ಸೋದರಳಿಯ.
ತಮ್ಮ 36 ವಯಸ್ಸಿಗೆ ಇಹಲೋಕ ತ್ಯಜಿಸಿದ ರಾಜಕುಮಾರನ ಅಂತ್ಯಕ್ರಿಯೆ ಭಾನುವಾರ ರಿಯಾದ್ನ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ಪ್ರಾರ್ಥನೆಯ ನಂತರ ನಡೆಯಲಿದೆ ಎಂದು ಅವರ ತಂದೆ ಪ್ರಿನ್ಸ್ ಖಾಲೀದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಮಾಹಿತಿ ನೀಡಿದ್ದಾರೆ.
ಕಳೆದ 2005ರಲ್ಲಿ 15 ವರ್ಷದವರಿರುವಾಗಲೇ ಲಂಡನ್ನ ಮಿಲಿಟರಿ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ರಾಜಕುಮಾರನಿಗೆ ಅಪಘಾತವಾಗಿತ್ತು. ಮೆದುಳಿಗೆ ತೀವ್ರವಾದ ಏಟು ಹಾಗೂ ವಿಪರೀತವಾಗಿ ರಕ್ತಸ್ರಾವ ಉಂಟಾಗಿ ಅವರು ಚೇತರಸಿಕೊಳ್ಳದೆ 20 ವರ್ಷಕೋಮಾದಲ್ಲಿದ್ದರು.
ರಾಜಕುಮಾರನಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡಲು ಸೌದಿ ಸರ್ಕಾರವು ಅಮೆರಿಕ ಹಾಗೂ ಸ್ಪೇನ್ನಿಂದ ತಜ್ಱ ವೈದ್ಯರನ್ನು ಕರೆಯಿಸಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ, ರಾಜಕುಮಾರನಿಗೆ ಪ್ರಜ್ಞೆಯೇ ಮರಳಿ ಬರಲಿಲ್ಲ. ಅಬ್ದುಲಜೀಜ್ ಅವರು ಮಗನ ಮೇಲೆ ಹೊಂದಿದ್ದ ಪ್ರೀತಿ ವಿಶ್ವದೆಲ್ಲೆಡೆ ಹಬ್ಬಿತ್ತು. ಅವನ ಸಾವು ಬದುಕು ದೇವರಿಚ್ಛೆ ಎಂದು ಅವರು ಹೇಳಿಕೊಂಡಿದ್ದರು.
ಅಲ್ಲದೆ ಮಗನು ಎದ್ದೇಳಲು ಸಾಧ್ಯವೇ ಇಲ್ಲ ಎಂದು ಹೇಳಿದಾಗಲೂ ಅಬ್ದುಲ್ಜೀಜ್ ಮಗನ ಆರೋಗ್ಯದಲ್ಲಿ ಸುಧಾರಣೆಯ ನಿರೀಕ್ಷಯಿಂದ ಚಿಕಿತ್ಸೆಯನ್ನು ನಿಲ್ಲಿಸಿರಲಿಲ್ಲ. ಇಂದೋ, ನಾಳೆಯೋ ಮಗ ಎದ್ದು ಬರುತ್ತಾನೆ ಎಂದು ಭಾವಿಸಿದ್ದ ಕುಟುಂಬದ ನಿರೀಕ್ಷೆಯಾಗಿದ್ದು, ಅಂತಿಮವಾಗಿ ಮಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ರಾಜಕುಮಾರನ ಅಗಲಿಕೆಯಿಂದ ರಾಜನ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.




