Gadag News: ಕಳೆದ ಕೆಲ ದಿನಗಳಿಂದ ತಾಲ್ಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು, ಮುಂಗಾರು ಹಂಗಾಮಿನ ಬೆಳೆಗಳಿಗೆ ಅಗತ್ಯವಾಗಿರುವ ಯೂರಿಯಾ ರಸಗೊಬ್ಬರದ ಕೊರತೆ ಎದುರಾಗಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಎರಡು ಅಂಗಡಿಗಳಿಗೆ ಮಾತ್ರ ಯೂರಿಯಾ ಗೊಬ್ಬರ ಸರಬರಾಜು ಆಗಿದ್ದು, ರೈತರು ತಾಮುಂದು ನಾ ಮುಂದು ಎಂದು ನೂಕುನೂಗ್ಗಲು ಆಗಿದೆ.
ಮಳೆ ಬಿಡುವು ನೀಡುತ್ತಿದಂತೆ ರಸಗೊಬ್ಬರ ಖರೀದಿಗೆ ರೈತರಲ್ಲಿ ಧಾವಂತ ಕಂಡುಬಂದಿದ್ದು ಬೇಡಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಯೂರಿಯಾ ಆವಕ ಆಗದ ಕಾರಣ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿದೆ.
ವರ್ತಕರು ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಈ ವಿಷಯವನ್ನು ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ದೂರುಗಳು ರೈತರಿಂದ ಕೇಳಿಬಂದಿವೆ.
ನಿರಂತರ ಮಳೆಯಿಂದಾಗಿ ಜಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ತೇವಾಂಶ ಉಳಿದಿದ್ದು ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿಬೆಳೆಗಳು ಸದ್ಯ ಸಾರಜನಕದ ಕೊರತೆಯಿಂದ ಬಳಲುತ್ತಿದ್ದು ಹಳದಿ ಬಣ್ಣಕ್ಕೆ ತಿರುಗಿವೆ. ಬೆಳೆಗಳಿಗೆ ಸಾರಜನಕ ಪೂರೈಸುವ ಯೂರಿಯಾ ಗೊಬ್ಬರವನ್ನು ನೀಡದಿದ್ದರೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂಬ ಚಿಂತೆ ರೈತರದು.
ಕೃಷಿ ಇಲಾಖೆ ಸಹಕಾರ ಸಂಘಗಳ ಮೂಲಕ ಯೂರಿಯಾ ಪೂರೈಸುತ್ತಿದೆ. ಆದರೆ ಗೊಬ್ಬರವನ್ನು ಯಾರಿಗೆ ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ ಎಂಬ ಬಗ್ಗೆ ಕೃಷಿ ಇಲಾಖೆ ಮುತುವರ್ಜಿ ವಹಿಸಿಲ್ಲ. ಹಾಗಾಗಿ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದರೆ ಸಹಕಾರ ಸಂಘಗಳಲ್ಲಿನ ಯೂರಿಯಾ ಪ್ರಭಾವಿ ವ್ಯಕ್ತಿಗಳ ಪಾಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.