ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಧರ್ಮಸ್ಥಳ ಪ್ರಕರಣದ ಅಧಿಕೃತ ತನಿಖೆ ಪ್ರಾರಂಭ ಆಗುತ್ತಿದೆ. SIT ಟೀಂ ಈಗಾಗಲೇ ಧರ್ಮಸ್ಥಳಕ್ಕೆ ಎಂಟ್ರಿ ಕೊಟ್ಟಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಧರ್ಮಸ್ಥಳಗಳಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಆಗಿದೆ ಎಂದು ಆರೋಪ ಮಾಡಿ ಪೊಲೀಸರ ಮುಂದೆ ಬಂದು ಹೇಳಿಕೆ ನೀಡಿದ್ದ. ಈ ಎಲ್ಲಾ ಬೆಳವಣಿಗೆಯಿಂದ ಆ ಅನಾಮಧೇಯ ವ್ಯಕ್ತಿ ಈಗ ಎಲ್ಲಿದ್ದಾನೆ ಎಂಬ ಪ್ರಶ್ನೆ ಮೂಡಿದೆ.
ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂಬ ಗಂಭೀರ ಆರೋಪ ಮಾಡಿರುವ ಅನಾಮಧೇಯ ವ್ಯಕ್ತಿಯೊಬ್ಬ ಜುಲೈ 11ರಂದು ದೂರನ್ನೂ ಸಹ ನೀಡಿದ್ದ. ಇನ್ನು ಈ ಕೊಲೆಗಳ ಹೆಣಗಳನ್ನು ತಾನೇ ಹೂತು ಹಾಕಿದ್ದು, ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಅವುಗಳ ಅಸ್ತಿಪಂಜರವನ್ನು ಸಮಾಧಿ ಅಗೆದು ತೋರಿಸುವುದಾಗಿ ಹೇಳಿದ್ದ. ಜುಲೈ 11ರಂದು ಎಫ್‌ಐಆರ್ ದಾಖಲಾದ ಬಳಿಕ ಜುಲೈ 16ರಂದು ಮತ್ತೆ ಧರ್ಮಸ್ಥಳಕ್ಕೆ ಆಗಮಿಸಿದ್ದ ಈತ ಸಮಾಧಿ ತೋರಿಸಲು ಸಿದ್ಧನಿದ್ದ. ಆದರೆ ಅಂದು ಪೊಲೀಸರು ತನಿಖೆ ನಡೆಸದ ಕಾರಣ ಬರಿಗೈನಲ್ಲಿ ವಾಪಸ್ ಆಗಿದ್ದ.
ಆ ಬಳಿಕ ರಾಜ್ಯ ಸರ್ಕಾರ ಈ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಈಗಾಗಲೇ ಈ ತಂಡ ಬೆಳ್ತಂಗಡಿಯಲ್ಲಿ ವಾಸ್ತವ್ಯ ಹೂಡಿ, ತನಿಖೆ ಪ್ರಾರಂಭ ಮಾಡಿದೆ. ಇಷ್ಟೆ ಅಲ್ಲದೆ ಧರ್ಮಸ್ಥಳದಲ್ಲಿ ಮಫ್ತೀ ಟೀಂ ಕೂಡ ಎಂಟ್ರಿ ಕೊಟ್ಟಿದೆ. ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ಪ್ರಕರಣವನ್ನು ವರ್ಗಾಯಿಸಿಕೊಂಡ ಬಳಿಕ ನ್ಯಾಯಾಲಯದ ಅನುಮತಿ ಪಡೆದು ದೂರುದಾರನನ್ನು ಭೇಟಿಯಾಗಲಿದೆ.
ಸದ್ಯ ಎಸ್‌ಐಟಿ ತಂಡಕ್ಕೆ ಆ ಅನಾಮಧೇಯ ದೂರುದಾರ ಇರುವ ಸ್ಥಳ ಪತ್ತೆಯಾಗಿದ್ದು, ಭದ್ರತಾ ದೃಷ್ಟಿಯಿಂದ ಆತ ಕೇರಳದಲ್ಲಿದ್ದಾನೆ ಎನ್ನಲಾಗಿದೆ. ಜುಲೈ 16ರ ಬಳಿಕ ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಆತ ತನ್ನ ವಕೀಲರ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದೆ. ಅವನ ಪೂರ್ತಿ ವಿವರವನ್ನು ಗೌಪ್ಯವಾಗಿ ಇಡಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

