ಅಶ್ಲೀಲ ವಿಷಯ ಪ್ರಸಾರ ಮಾಡುತ್ತಿದ್ದ ಉಲ್ಲು, ALTT, ಡಿಸಿಫ್ಲಿಕ್ಸ್ ಸೇರಿದಂತೆ ೨೫ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಅಶ್ಲೀಲ ವ್ಯಂಗ್ಯ ಮತ್ತು ದೀರ್ಘ ಲೈಂಗಿಕ ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಹೌದು ವಿಶೇಷವಾಗಿ ಓಟಿಟಿ ಪ್ಲಾಟ್‌ಫಾರ್ಮ್‌ಗಳು, ಇತ್ತೀಚೆಗೆ ಹೆಚ್ಚಾಗಿ ಜನಪ್ರಿಯವಾಗುತ್ತಿವೆ. ಬೇರೆಬೇರೆ ಶೃಂಗಾರ ಕಥೆಗಳಿಂದ ಹಿಡಿದು, ಹೊಸ ಪ್ರಾಯೋಗಿಕ ಚಲನಚಿತ್ರಗಳವರೆಗೆ ಇವು ಪ್ರದರ್ಶಿಸುತ್ತಿವೆ. ಆದರೆ ಇವುಗಳಲ್ಲಿ ಕೆಲವು ಅಶ್ಲೀಲತೆ, ಲೈಂಗಿಕ ದೃಶ್ಯಗಳು, ಮತ್ತು ಅನುಚಿತ ಭಾಷೆಗಳನ್ನು ಬಳಸುತ್ತಿರುವುದು ಗಂಭೀರ ವಿಚಾರವಾಗಿದೆ. ಇದರಿಂದಾಗಿ ಬಾಲಕರು, ಯುವಕರು ಮತ್ತು ಕುಟುಂಬದವರು ಅಸಹಜ ವಿಷಯಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ದೂರುಗಳು ಇತ್ತೀಚೆಗೆ ಹೆಚ್ಚಾಗಿದ್ದವು.
ನಿಷೇಧಿತ ಪ್ಲಾಟ್‌ಫಾರ್ಮ್‌ಗಳ ಪಟ್ಟಿ ನೋಡೋದಾದ್ರೆ
ಉಲ್ಲು, ALTT, ಡೆಸಿಫ್ಲಿಕ್ಸ್, ಬಿಗ್ ಶಾಟ್ಸ್, ಬೂಮೆಕ್ಸ್, ನವರಸ ಲೈಟ್, ಗುಲಾಬ್, ಕಂಗನ್, ಬುಲ್, ಜಲ್ವಾ, ಶೋಹಿಟ್, ವಾವ್ ಎಂಟರ್ಟೈನ್ಮೆಂಟ್, ಲುಕ್ ಎಂಟರ್ಟೈನ್ಮೆಂಟ್, Hitprime, ಫೆನಿಯೊ, ಶೋಎಕ್ಸ್, ಸೋಲ್ ಟಾಕೀಸ್, ಅಡ್ಡಾ ಟಿವಿ, ಹಾಟ್ಎಕ್ಸ್ ವಿಐಪಿ, ಹಲ್ಚುಲ್, ಮೂಡ್ಎಕ್ಸ್, ನಿಯಾನ್ಎಕ್ಸ್ ವಿಐಪಿ, ಫ್ಯೂಗಿ, Mozflix, ಟ್ರಿಫ್ಲಿಕ್ಸ್ ಈ ಆ್ಯಪ್‌ಗಳನ್ನ ನಿಷೇಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ಹೊರಡಿಸಿದೆ.
ಈ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಪೂರ್ತಿಯಾಗಿ ಅಶ್ಲೀಲ ವಿಷಯಗಳೇ ಮುಖ್ಯ ಆಕರ್ಷಣೆಯಾಗಿ ಮಾರಾಟವಾಗುತ್ತಿದ್ದವು. ಕೆಲವು ದೃಶ್ಯಗಳಲ್ಲಿ ಲೈಂಗಿಕತೆ, ಅಸಭ್ಯ ಸಂಭಾಷಣೆಗಳು ಮತ್ತು ನಗ್ನತೆಯ ಪ್ರದರ್ಶನ ಇರುತ್ತಿದ್ದು, ಯಾವುದೇ ಸಾಮಾಜಿಕ ಸಂದೇಶ ಇಲ್ಲದಂತಾಗಿದೆ.
ಕಳೆದ ವರ್ಷದಿಂದ ಇವುಗಳ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಹಾಗಾಗಿ ಇವುಗಳನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳಿಗೆ ಪರಿಶೀಲನೆ ಮಾಡಿದ ಬಳಿಕ, ಸರ್ಕಾರ ಈ ನಿಷೇಧವನ್ನು ಜಾರಿಗೊಳಿಸಿದೆ.
ವರದಿ : ಲಾವಣ್ಯ ಅನಿಗೋಳ