Newdelhi: ನವದೆಹಲಿ: ಕರ್ನಾಟಕಕ್ಕೆ ರಸಗೊಬ್ಬರ ಪೂರೈಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ ಸುಳ್ಳು ಹೇಳುತ್ತ ರಾಜ್ಯದ ಜನರ ದಿಕ್ಕು ತಪ್ಪಿಸೋ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಮುಂಗಾರು ಹಂಗಾಮಿಗಾಗಿ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾದ ಅವಶ್ಯಕತೆಯಿದೆ ಎಂದು ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತ್ತು. ಆದರೆ, ಕೇಂದ್ರ ರಸಗೊಬ್ಬರ ಇಲಾಖೆ ರಾಜ್ಯದ ರೈತರ ಹಿತದೃಷ್ಟಿಯಿಂದ ಸಕಾಲಿಕವಾಗಿ 8.73 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ ಮಾಡಿದೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 7.08 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಮಾರಾಟ ದಾಖಲಾಗಿದೆ. ಕೇಂದ್ರ ಸರ್ಕಾರ ಸಕಾಲಕ್ಕೆ ಸಮರ್ಪಕವಾಗಿ ರಸಗೊಬ್ಬರ ಪೂರೈಸಿದ್ದರಿಂದಲೇ ಇಷ್ಟೊಂದು ಪ್ರಮಾಣದಲ್ಲಿ ರಸಗೊಬ್ಬರ ವಹಿವಾಟು ನಡೆದಿದೆ. ವಾಸ್ತವ ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಅವರು ವಿನಾಕಾರಣ ಕೇಂದ್ರದ ಮೇಲೆ ವೃಥಾ ಆರೋಪ ಮಾಡುತ್ತಿರುವುದು ನಿಜಕ್ಕೂ ಶೋಚನೀಯ ಎಂದು ಖಂಡಿಸಿದ್ದಾರೆ ಸಚಿವ ಜೋಶಿ.
ಸಿಎಂಗೆ ಸುಳ್ಳು ಹೇಳೋದೇ ಕಾಯಕವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೀ ಸುಳ್ಳು ಹೇಳುವುದೇ ಒಂದು ಕಾಯಕವಾಗಿ ಬಿಟ್ಟಿದೆ. ಯಾವತ್ತೂ ಮಾತಿಗೆ ಮೊದಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನೇ ಚಟವಾಗಿಸಿಕೊಂಡಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಸಚಿವ ಪ್ರಲ್ಹಾದ ಜೋಶಿ.
ಯೂರಿಯಾ ಅಭಾವವಿಲ್ಲ ಎಂದಿದ್ದಾರೆ ಚಲುವರಾಯಸ್ವಾಮಿ: ರಾಜ್ಯದಲ್ಲಿ ಯೂರಿಯಾ ಅಭಾವವಿಲ್ಲ. ಹೆಚ್ಚಿನ ಸಂಗ್ರಹಣೆಯಿದೆ ಎಂದು ಖುದ್ದು ಕೃಷಿ ಸಚಿವ ಚಲುವರಾಯಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಆರೋಪ ಅಕ್ಷಮ್ಯ: ರಸಗೊಬ್ಬರ ಪೂರೈಕೆ, ದಾಸ್ತಾನು ವಿಷಯದಲ್ಲಿ ಕೃಷಿ ಸಚಿವರೇ ಸತ್ಯ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಹೇಳಿಕೆ ನೀಡಿ ಸ್ಪಷ್ಟಪಡಿಸಿದ್ದಾರೆ. ಆದರೆ, ಸಿಎಂ ಮಾತ್ರ ಅವಾಸ್ತವಿಕ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಕುರ್ಚಿ ಗಲಾಟೆ, ಹದಗೆಟ್ಟ ರಾಜ್ಯದ ಆರ್ಥಿಕ ಸ್ಥಿತಿ ಮತ್ತು ತಮ್ಮ ಸರ್ಕಾರದ ದುರಾಡಳಿತವನ್ನೆಲ್ಲ ಮರೆಮಾಚಲು ಹೀಗೆ ಕೇಂದ್ರ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡುತ್ತಿರುವುದು ಅಕ್ಷಮ್ಯ ಎಂದು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.