ಕಚ್ಚಿ ಕಚ್ಚಿ ತಿಂದ ಬೀದಿನಾಯಿಗಳು : ಬಲಿಯಾದ ವೃದ್ಧ!

ಬೆಂಗಳೂರು:ಬೀದಿ ನಾಯಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿರಿಯಾನಿ ನೀಡುವ ಯೋಜನೆಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೀದಿನಾಯಿಗಳ ಹಿಂಡು 71 ವರ್ಷದ ಸೀತಪ್ಪ ಎಂಬ ವೃದ್ಧ ವ್ಯಕ್ತಿಯನ್ನು ಕಚ್ಚಿ ಕೊಂದು ಹಾಕಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಟೆಲಿಕಾಮ್ ಲೇಔಟ್‌ನಲ್ಲಿ ಈ ಭೀಕರ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೂಲಗಳ ಪ್ರಕಾರ ಸೀತಪ್ಪ ಅವರು ಸೋಮವಾರ ಬೆಳಗ್ಗೆ ವಾಕಿಂಗ್‌ಗೆ ಹೋಗುತ್ತಿದ್ದಾಗ 8 ರಿಂದ 9 ಬೀದಿನಾಯಿಗಳು ದಾಳಿ ಮಾಡಿದ್ದು, ಕೈ, ಕಾಲಿನ ಅರ್ಧ ಮಾಂಸವನ್ನೇ ಕಚ್ಚಿ ತಿಂದಿವೆ. ಅಷ್ಟೇ ಅಲ್ಲದೆ ಮುಖಕ್ಕೂ ಕಚ್ಚಿವೆ. ನಾಯಿಗಳ ದಾಳಿಗೆ ವೃದ್ಧ ಸೀನಪ್ಪ ಕೊನೆಯುಸಿರೆಳೆದಿದ್ದಾರೆ.

ಸೋಮವಾರ ಬೆಳಗಿನ ಜಾವ 3 ಗಂಟೆಗೆ ಸೀತಪ್ಪ ಕಂಬಳಿ ಸುತ್ತಿಕೊಂಡು ವಾಕಿಂಗ್ ಮಾಡುತ್ತಿದ್ದರು. ಕಂಬಳಿಯಲ್ಲಿ ಸುತ್ತಿಕೊಂಡು ಓಡಾಡುತ್ತಿದ್ದ ಅವರನ್ನು ನೋಡಿ ಬೀದಿ ನಾಯಿಗಳು ಮುಗಿಬಿದ್ದಿವೆ. ಸೀತಪ್ಪ ಅವರ ಕೈ ಮತ್ತು ಇತರ ಭಾಗಗಳನ್ನು ನಾಯಿಗಳು ಪದೇ ಪದೇ ಕಚ್ಚಿದವು. ಬಳಿಕ ಸ್ಥಳೀಯರ ಮಧ್ಯಪ್ರವೇಶದೊಂದಿಗೆ ನಾಯಿಗಳು ಅಲ್ಲಿಂದ ಪರಾರಿಯಾಗಿವೆ.

ಕೂಡಲೇ ಸೀತಪ್ಪ ಅವರನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಅವರು ಸತ್ತಿದ್ದಾನೆ ಎಂದು ವೈದ್ಯರು ಹೇಳಿದರು. ಪ್ರಸ್ತುತ ಸೀತಪ್ಪ ಶವವನ್ನು ಸಂಜಯ್ ನಗರದ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇನ್ನು ಬೀದಿನಾಯಿ ದಾಳಿಯಿಂದ ಮೃತಪಟ್ಟ ವೃದ್ಧ ಸೀತಪ್ಪ ಕುಟುಂಬಸ್ಥರಿಗೆ ಕೇವಲ 1 ಲಕ್ಷ ರೂ. ಪರಿಹಾರ ಕೊಡುವುದಾಗಿ ಬಿಬಿಎಂಪಿ ಘೋಷಣೆ ಮಾಡಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author