Belagavi: ಕಬ್ಬು ಬೆಳೆಗಾರರ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಲ್ಲಿ ಬೆಂಬಲ

Belagavi: ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಚಿಕ್ಕೋಡಿ, ಅಥಣಿ ಸೇರಿದಂತೆ ಹಲವು ಕಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಇತ್ತ ಬಂದ್ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳ್ಳಂಬೆಳಗ್ಗೆಯೇ ರಸ್ತೆಗಿಳಿದ ರೈತರು ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕೋಡಿ ಹಾಗೂ ಅಥಣಿ ತಾಲೂಕುಗಳಲ್ಲಿ ಬಂದ್ ಪರಿಣಾಮ ಹೆಚ್ಚಾಗಿ ಕಂಡುಬಂದಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಚಿಕ್ಕೋಡಿ-ಮಹಾಲಿಂಗಪುರ ರಸ್ತೆಯಲ್ಲೇ ರೈತರು ಅಡುಗೆ ತಯಾರಿಸಿ ಉಪಹಾರ ಸೇವಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ರಸ್ತೆಗಳಿಗೆ ಮುಳ್ಳುಕಂಟಿಗಳನ್ನು ಹಾಕಿ ರಸ್ತೆ ತಡೆ ನಡೆಸಲಾಗಿದೆ.

ರಸ್ತೆ ತಡೆ ಹಿನ್ನೆಲೆಯಲ್ಲಿ ಬಸ್ ಸಂಚಾರ ಸೇರಿದಂತೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾದ್ಯಂತ ಬಂದ್ ಪರಿಣಾಮ ಜನಜೀವನದ ಮೇಲೆ ಬೀರಿದೆ.

ಧಾರವಾಡದಲ್ಲಿ ನಿಷೇಧಾಜ್ಞೆ:

ಇತ್ತ ಕಬ್ಬು ಬೆಳೆಗಾರರ ಬಂದ್ ಕರೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮುಂದಿನ ಆದೇಶದವರೆಗೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಹುಬ್ಬಳ್ಳಿ-ಅಂಕೋಲಾ, ನವಲಗುಂದ-ಸೋಲಾಪುರ ಹಾಗೂ ಹುಬ್ಬಳ್ಳಿ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಅವುಗಳ ಸುತ್ತಮುತ್ತಲಿನ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಸಾರ್ವಜನಿಕ ಹಾಗೂ ವಾಣಿಜ್ಯ ವಾಹನಗಳ ಸಂಚಾರಕ್ಕೆ ಪ್ರಮುಖವಾಗಿರುವ ಈ ರಸ್ತೆಗಳಲ್ಲಿ ಶಾಂತಿ ಕಾಪಾಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಒಟ್ಟಿನಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ರೈತರ ಹೋರಾಟ ತೀವ್ರಗೊಂಡಿದೆ. ಬೆಳಗಾವಿಯಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದರೆ, ಧಾರವಾಡ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರೈತರ ಬೇಡಿಕೆಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

About The Author