ಡಾಕ್ಟರ್‌ಗೆ ಶಾಕ್ – ಕೋಲಾರದಲ್ಲಿ ಹೊಸ ಬ್ಲಡ್ ಗ್ರೂಪ್!

ವಿಶ್ವದಲ್ಲೇ ಎಲ್ಲೂ ಕಾಣ ಸಿಗದ ವಿಭಿನ್ನ ಹೊಸ ರಕ್ತ ಗುಂಪು ಕಂಡು ಬಂದಿದೆ. ಹೌದು ಕರ್ನಾಟಕದ ಕೋಲಾರ ಜಿಲ್ಲೆಯ 38 ವರ್ಷದ ಮಹಿಳೆಯೊಬ್ಬರ ರಕ್ತದಲ್ಲಿ ಪತ್ತೆಯಾದ ಅಪರೂಪದ ಹೊಸ ರಕ್ತ ಗುಂಪಿನ ಕಥೆ ಇದು. ಈ ಹೊಸ ರಕ್ತ ಗುಂಪಿಗೆ “CRIB” ಎಂದು ಹೆಸರಿಸಲಾಗಿದೆ. ಇದು ವಿಶ್ವದಲ್ಲೇ ಈವರೆಗೆ ಕಂಡು ಬರದ, ಅತ್ಯಂತ ವಿರಳ ಮತ್ತು ವಿಶಿಷ್ಟ ರಕ್ತ ಗುಂಪಾಗಿದೆ.

ಹೌದು ಮಹಿಳೆಯೊಬ್ಬರು ಹೃದಯ ಶಸ್ತ್ರಚಿಕಿತ್ಸೆಗೆ ಕೋಲಾರದ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿದಾಗ, ಅವರ ರಕ್ತದ ಗುಂಪು ಸಾಮಾನ್ಯವಾಗಿ O Rh+ ಆಗಿತ್ತು. ಆದರೆ, ಅಪರಿಚಿತ ಸಂಗತಿಯೆಂದರೆ – ಇತರ ಯಾವುದೇ O+ ರಕ್ತಗಳು ಅವರ ದೇಹಕ್ಕೆ ಹೊಂದಿಕೊಳ್ಳುತ್ತಿಲ್ಲ.

ಇದರಿಂದ ತಕ್ಷಣವೇ ಅನುಮಾನಗೊಂಡ ವೈದ್ಯರು ಹೆಚ್ಚಿನ ಪರೀಕ್ಷೆಗಾಗಿ ಮಹಿಳೆಯ ರಕ್ತವನ್ನು ರೋಟರಿ ಬೆಂಗಳೂರು ಟಿಟಿಕೆ ಬ್ಲಡ್ ಸೆಂಟರ್ ನ ಅಡ್ವಾನ್ಸ್ಡ್ ಇಮ್ಯುನೋ ಹೆಮಟಾಲಜಿ ರೆಫರೆನ್ಸ್ ಲ್ಯಾಬ್‌ಗೆ ಕಳುಹಿಸಿದ್ದಾರೆ.

ಅಡ್ವಾನ್ಸ್ ಲ್ಯಾಬ್‌ನ ಫಲಿತಾಂಶ ಏನು ಹೇಳಿದೆ ಅನ್ನೋದನ್ನ ನೋಡೋದಾದ್ರೆ ತಜ್ಞರಾದ ಡಾ. ಅಂಕಿತ್ ಮಾಥುರ್ ನೇತೃತ್ವದಲ್ಲಿ ಸೆರೋಲಾಜಿಕಲ್ ತಂತ್ರಜ್ಞಾನ ಬಳಸಲಾಯಿತು. ಮಹಿಳೆಯ ರಕ್ತವನ್ನು ಪರೀಕ್ಷಿಸಿದಾಗ, ಅದು ಪ್ಯಾನ್-ರಿಯಾಕ್ಟಿವ್ ಅನ್ನೊದಾಗಿ ಕಂಡುಬಂದಿದೆ.
ಅಂದರೆ, ಆ ರಕ್ತದ ಪ್ಲಾಸ್ಮಾ ಎಲ್ಲ ಮಾದರಿಗಳ ಕೆಂಪು ರಕ್ತಕಣಗಳೊಂದಿಗೆ ಪ್ರತಿಕ್ರಿಯಿಸುತ್ತಿತ್ತು.

ಇದು ಎಲ್ಲಿ ಹೋಲಿಕೆ ಮಾಡಿದರೂ ಹೊಂದಿಕೊಳ್ಳುತ್ತಿರಲಿಲ್ಲ. ಅವರ ಕುಟುಂಬದ 20 ಸದಸ್ಯರ ರಕ್ತ ಮಾದರಿ ಸಂಗ್ರಹಿಸಲಾಯಿತು. ಆದರೆ ಯಾರಲ್ಲಿಯೂ ಆ ರೀತಿಯ ಗುಣಲಕ್ಷಣಗಳು ಕಂಡುಬರಲಿಲ್ಲ. ಹಾಗಾಗಿ ಇದು ವಿಶ್ವದಲ್ಲೇ ಈವರೆಗೆ ದಾಖಲಾಗದ, ಹೊಸ ಪ್ರತಿಜನಕವಿರುವ ರಕ್ತದ ಗುಂಪು ಎಂದು ಗುರುತಿಸಲಾಯಿತು.

ಇದೊಂದು ಅಚ್ಚರಿಯ ಸಂಗತಿ ಅಂದ್ರೆ ಇಂಥ ಅಪರೂಪದ ರಕ್ತ ಗುಂಪಿನ ಮಹಿಳೆಗೆ ಸರಿಯಾದ ರಕ್ತ ಸಿಗುವುದು ಅಸಾಧ್ಯವಾದ ಕಾರಣ, ವೈದ್ಯರು ಮತ್ತು ಕುಟುಂಬದವರು ಉತ್ತಮ ಯೋಜನೆಯೊಂದಿಗೆ ರಕ್ತವಿಲ್ಲದೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ.

ಹಾಗಾದ್ರೆ ಏನಿದು CRIB ರಕ್ತ ಗುಂಪು?
ಹೆಸರಿನ ಹಿಂದಿನ ಅರ್ಥ ನೋಡೋದಾದ್ರೆ CR = Cromer (ಇದು ಬ್ಲಡ್ ಗ್ರೂಪ್ ಸಿಸ್ಟಮ್‌ನ ಹೆಸರು) IB = India – Bangalore. ಈ ಹೆಸರನ್ನು 2025ರ ಜೂನ್‌ನಲ್ಲಿ, ಇಟಲಿಯ ಮಿಲನ್‌ನಲ್ಲಿ ನಡೆದ 35ನೇ ISBT ಕಾಂಗ್ರೆಸ್ ನಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.

ವಿಶ್ವದಲ್ಲಿ ಮೊದಲ ಬಾರಿಗೆ ಇಂಥ ಪ್ರತಿಜನಕ ಪತ್ತೆಯಾಗಿದೆ. ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಮತ್ತು ವಿಶೇಷವಾಗಿ ಬೆಂಗಳೂರು ಕೇಂದ್ರವಾದ ಸಾಧನೆವಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author