ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಪರಾಧ ಸಾಬೀತಾಗಲು, ಸಾವಿರಾರು ಫೋಟೋಗಳು, ವೀಡಿಯೋಗಳು ಸಾಕ್ಷಿ ಹೇಳಿವೆ. ಎಸ್‌ಐಟಿ ಸಂಗ್ರಹಿಸಿದ್ದು, ಒಂದಲ್ಲ.. ಎರಡಲ್ಲ.. ಬರೋಬ್ಬರಿ 15 ಸಾವಿರ ಫೋಟೋಗಳು, 2 ಸಾವಿರ ವೀಡಿಯೋಗಳು. ಇವುಗಳನ್ನು ತೆಗೆದಿದ್ದು ಬೇರ್ಯಾರು ಅಲ್ಲ.. ಸ್ವತಃ ಪ್ರಜ್ವಲ್ ರೇವಣ್ಣ. ತಮ್ಮ ಕೈಯ್ಯಾರೆ ಗುಂಡಿ ತೋಡಿ, ಅದರೊಳಗೆ ಅವರೇ ಬಿದ್ದಿದ್ದಾರೆ.
ಕಾರು ಚಾಲಕ ಕೊಟ್ಟ ಫೋಟೋ, ವೀಡಿಯೋ ಸಾಕ್ಷಿ ತೋರಿಸುವಂತೆ, ಪ್ರಜ್ವಲ್ ರೇವಣ್ಣ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಎಲ್ಲವೂ ಅಶ್ಲೀಲವಾಗಿವೆ ಅಂತಾ ಛೀಮಾರಿ ಹಾಕಿದ್ರು. ಎಲ್ಲಾ ಸಾಕ್ಷಿಗಳನ್ನು ನೀಡುವುದಿಲ್ಲ ಅಂತಾ ನಿರಾಕರಿಸಿತ್ತು.
ಮಹಿಳೆಯರ ಖಾಸಗಿತನ ಉಲ್ಲಂಘಿಸುವ ದಾಖಲೆಗಳು ನಿಮಗೆ ಏನು ಬೇಕು? ಅಶ್ಲೀಲತೆಗೂ ಒಂದು ಮಿತಿ ಇರುತ್ತದೆ. ಪ್ರಜ್ವಲ್ ರೇವಣ್ಣ ಎಂದ ಮಾತ್ರಕ್ಕೆ ದೇಶದ ಕಾನೂನು ಬದಲಾಗಲ್ಲ. ಎಲ್ಲವನ್ನೂ ಬಹಿರಂಗ ಪಡಿಸಲು ಸಾಧ್ಯವಿಲ್ಲ ಅಂತಾ ಅಭಿಪ್ರಾಯಪಟ್ಟಿದ್ರು.
ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಗಜಾನನ ಭಟ್, ಹೊಸ ದಾಖಲೆ ಬರೆದಿದ್ದಾರೆ. ಈ ರೀತಿಯ ಪ್ರಕರಣವನ್ನು, ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ, 7 ತಿಂಗಳಲ್ಲಿ ತೀರ್ಪು ಕೊಟ್ಟಿದ್ದಾರೆ. ಈವರೆಗೆ ಯಾವ ಪ್ರಕರಣದಲ್ಲೂ ಇಷ್ಟು ಬೇಗ ತೀರ್ಪು ಬಂದ ಉದಾಹರಣೆ ಇಲ್ಲ.
2024ರ ಏಪ್ರಿಲ್ 28ರಂದು ಹೊಳೆನರಸೀಪುರ ಠಾಣೆಯಲ್ಲಿ, ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಪ್ರಕರಣ ದಾಖಲಾಗಿತ್ತು. ಮೈಸೂರಿನ ಕೆ.ಆರ್.ನಗರದ ಸಂತ್ರಸ್ತ ಮಹಿಳೆ ದೂರು ನೀಡಿದ್ರು. ಈ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಒಟ್ಟು 424 ಪುಟಗಳ ತೀರ್ಪನ್ನು ನೀಡಿದೆ. ಇನ್ನೂ ಪ್ರಜ್ವಲ್ ರೇವಣ್ಣ ವಿರುದ್ಧದ 3 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.