ಮತ್ತೊಮ್ಮೆ ಒಳ ಮೀಸಲಾತಿ ಕಿಚ್ಚು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿ ಹಸ್ತಾಂತರಕ್ಕೆ ಮುನ್ನ, ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿಯ ಶಾಸಕರು ಹಾಗೂ ಸಚಿವರು ವಿಶೇಷ ಸಭೆ ನಡೆಸಲಿದ್ದಾರೆ. ಈ ಸಭೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ನೇತೃತ್ವ ವಹಿಸಲಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಯ ಉಪಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸುತ್ತಿದೆ. ಈ ಸಮೀಕ್ಷೆಯು ಇದೀಗ ಪೂರ್ಣಗೊಂಡಿದೆ. ಮತ್ತು ಆಗಸ್ಟ್ 4ರಂದು ಆಯೋಗ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಇದನ್ನು ಮುಂದಿಟ್ಟುಕೊಂಡು ಆಗಸ್ಟ್ 2ರಂದು ಒಂದು ಮಹತ್ವದ ಸಭೆ ನಡೆಸುವ ಸಾಧ್ಯತೆಯಿದೆ.
ಈ ಸಭೆಯ ಮುಖ್ಯ ಉದ್ದೇಶ – ಪರಿಶಿಷ್ಟ ಜಾತಿಯ ಉಪಜಾತಿಗಳ ನಾಯಕರ ಅಭಿಪ್ರಾಯ ಸಂಗ್ರಹಿಸಿ, ವರದಿಯ ಜಾರಿಗೆ ಯಾವುದೇ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಂತ ಡಾ ಜಿ ಪರಮೇಶ್ವರ್ ಹೇಳಿದರು. ಈ ಸಭೆಯನ್ನು ಕೇವಲ ನಡವಳಿಕೆ ಎನ್ನಲು ಸಾಧ್ಯವಿಲ್ಲ. ಇದು ಕಾಂಗ್ರೆಸ್ ಪಕ್ಷದ ಒಳಗಿನ ಎಸ್‌ಸಿ ಸಚಿವರು ಮತ್ತು ಶಾಸಕರು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯೂ ಹೌದು ಎಂಬ ಆಲೋಚನೆಗಳು ನಡೆಯುತ್ತಿವೆ.
ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಕಾಂಗ್ರೆಸ್ ಎಸ್ ಸಿ, ಎಸ್ ಟಿ ಸಮುದಾಯದ ಶಾಸಕರು, ಸಚಿವರ ‘ಡಿನ್ನರ್’ ಸಭೆಗೆ ಹೈಕಮಾಂಡ್ ಬ್ರೇಕ್ ಹಾಕಿದ ವಿಚಾರ ಕುರಿತ ಪ್ರತಿಕ್ರಿಯಿಸಿದ ಪರಮೇಶ್ವರ್ ಹಿಂದಿನ ಬಾರಿ ಈ ರೀತಿಯ ಸಭೆ ಅಥವಾ ಡಿನ್ನರ್ ಮೀಟಿಂಗ್‌ನನ್ನು ಹೈಕಮಾಂಡ್ ತಡೆದಿತ್ತು. ಆದರೆ ಈ ಬಾರಿ ಗೃಹ ಸಚಿವ ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ – ಇದು ಯಾವುದೇ ರಾಜಕೀಯ ಒತ್ತಡ ನೀಡುವ ಸಭೆ ಅಲ್ಲ, ಬೃಹತ್ ರ್ಯಾಲಿ ನಡೆಸುವ ಯೋಜನೆ ಇದಾಗಿತ್ತು. ಆದರೆ ಈಗ ಕೇವಲ ಅಭಿಪ್ರಾಯ ಸಂಗ್ರಹದ ಸಭೆಯಾಗಿದೆ ಎನ್ನುತ್ತಿದ್ದಾರೆ.
ಪರಿಶಿಷ್ಟ ಸಮುದಾಯದಲ್ಲಿನ ಸಮೀಕ್ಷೆ ಮುಕ್ತಾಯಗೊಂಡಿರುವುದಾಗಿ ಹೇಳಲಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ವಿವಿಧ ಉಪ ಜಾತಿಗಳ ನಾಯಕರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ಸಂಗ್ರಹಿಸಲು ಬಯಸಿದ್ದೇವೆ. ಸಮೀಕ್ಷೆಗೂ ಹಿಂದೆಯೇ ಇಂತಹ ಸಭೆ ನಡೆದಿತ್ತು. ಇದು ಅದರ ಮುಂದುವರೆದ ಭಾಗವಾಗಿದೆ. ಈಗ ಸಮೀಕ್ಷೆ ಮುಗಿದಿದ್ದು, ಯಾವುದೇ ಗೊಂದಲವಾಗದಂತೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.

