ವರಲಕ್ಷ್ಮಿ ಹಬ್ಬ ಅಂದ್ರೆ ಲಕ್ಷ್ಮಿ ದೇವಿಗೆ ಅರ್ಪಿತವಾದ ಹಿಂದೂ ಹಬ್ಬ. ವರಗಳನ್ನು ನೀಡುವ ಮತ್ತು ಇಷ್ಟಾರ್ಥಗಳನ್ನು ಪೂರೈಸುವ ದೇವತೆ ಎಂದು ನಂಬಲಾಗಿದೆ. ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಕೂಡ ತಮ್ಮ ಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಯಾರೆಲ್ಲಾ ಹೇಗೆ ಹಬ್ಬವನ್ನ ಆಚರಿಸಿದ್ದಾರೆ ನೀವೇ ನೋಡಿ.
ರಾಧಿಕಾ ಕುಮಾರಸ್ವಾಮಿ ಅವರ ಮನೆಯಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ರಾಧಿಕಾ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ಮಾತ್ರವಲ್ಲ, ಅಪಾರ ದೈವಭಕ್ತೆ ಕೂಡ ಆಗಿದ್ದಾರೆ. ಎಲ್ಲ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ಆಚರಿಸುವ ಈ ಕಲಾವಿದೆಯು, ಈ ಸಲದ ವರಮಹಾಲಕ್ಷ್ಮಿ ಹಬ್ಬವನ್ನೂ ಅದ್ಧೂರಿಯಾಗಿ ಆಚರಿಸಿದ್ದಾರೆ.
ರಾಕಿಂಗ್ ದಂಪತಿಗಳಾಗಿರುವ ನಟ ಯಶ್ ಹಾಗು ರಾಧಿಕಾ ಪಂಡಿತ ವರಮಹಾಲಕ್ಷಿ ಹಬ್ಬವನ್ನ ಆಚರಿಸಿದ್ದಾರೆ. ಮನೆಯಲ್ಲೇ ಲಕ್ಷ್ಮಿಯನ್ನ ವಿವಿಧ ಹೂವುಗಳಿಂದ ಮುದ್ದಾಗಿ ಅಲಂಕಾರಗೊಳಿಸಿ, ಮಕ್ಕಳೊಂದಿಗೆ ಹಬ್ಬವನ್ನ ಆಚರಿಸಿದ್ದಾರೆ. ಮಕ್ಕಳ ತುಂಟದದ ಪೋಟೋವನ್ನ ಕೂಡ ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ.
‘ಕಾಂತಾರ’ ಹೀರೋ ರಿಷಬ್ ಶೆಟ್ಟಿ ಈ ಸಲ ಪತ್ನಿ ಪ್ರಗತಿ ಅವರೊಂದಿಗೆ ಲಕ್ಷ್ಮೀ ದೇವಿಯನ್ನು ಕೂರಿಸಿ, ಮನೆಯಿಂದಲೇ ಪೂಜೆಯನ್ನು ನೆರವೇರಿಸಿದ್ದಾರೆ. ಮಕ್ಕಳ ಜತೆಗೂಡಿ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ.
ನಟಿ ಅಮೂಲ್ಯ ಈ ವರ್ಷವೂ ತನ್ನ ಕುಟುಂಬದೊಂದಿಗೆ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಫೋಟೋಶೂಟ್ ಸಹ ಮಾಡಿಸಿಕೊಂಡಿದ್ದು, ಅಲ್ಲಿ ಅವರು ಧರಿಸಿರುವ ಬಿಳಿ ಬಣ್ಣದ ಸೀರೆ ಮತ್ತು ಪೋಸ್ ಗಳು ನಿಜಕ್ಕೂ ಗಮನಸೆಳೆಯುವಂತಿದೆ.
ಚಂದದ ಚೆಲುವೇ ಅದಿತಿ ಪ್ರಭುದೇವ ಈ ಬಾರಿ ತಮ್ಮ ಪುಟಾಣಿ ಮಗಳೊಂದಿಗೆ ದೇವಿಯ ಆರಾಧನೆ ಮಾಡಿದ್ದು, ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ. ಮಗಳಿಗೆ ಗುಲಾಬಿ ಬಣ್ಣದ ಬಟ್ಟೆ ಧರಿಸಿ, ತಾವು ಗುಲಾಬಿ ಬಣ್ಣದ ರವಿಕೆ ಜೊತೆಗೆ ಬಿಳಿ ಬಣ್ಣದ ಸೀರೆಯನ್ನ ಧರಿಸಿ ಹಬ್ಬವನ್ನ ಆಚರಿಸಿದ್ದಾರೆ. ದೇವಿಯ ಸಾನಿಧ್ಯದಲ್ಲಿ ದೇವಾಲಯದಂತಿರುವ ಅವರ ಮನೆ, ಈ ಬಾರಿ ಇನ್ನಷ್ಟು ವೈಭವದಿಂದ ತುಂಬಿತ್ತು.
ಇದೇ ಹಬ್ಬದ ಸಂಭ್ರಮದಲ್ಲಿ ಇನ್ನಷ್ಟು ನಟ ನಟಿಯರು ಕೂಡ ತಮ್ಮ ಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಿದ್ದಾರೆ. ಅಭಿಷೇಕ್ – ಅವಿವಾ ದಂಪತಿ ತಮ್ಮ ಮಗನ ಜೊತೆಗೆ ಮೊದಲ ವರಮಹಾಲಕ್ಷ್ಮಿ ಹಬ್ಬ ಆಚರಿಸಿದರು.
ನಟಿ ಶ್ರುತಿ ಕೃಷ್ಣ, ಕ್ರಿಷಿ ತಾಪಂಡ, ಶ್ವೇತಾ ಚಂಗಪ್ಪ, ಮೋಕ್ಷಿತ, ಹರ್ಷಿಕಾ ಪೂಣಚ್ಚ, ಭವ್ಯಾ ಗೌಡ, ಅನುಪಮಾ ಗೌಡ, ದೀಪಿಕಾ ದಾಸ್, ಮೇಘಾ ಸೇರಿದಂತೆ ಎಲ್ಲಾ ಕಲಾವಿದರು ತಮ್ಮದೇ ಆದ ಶೈಲಿಯಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿದರು. ಇಂದಿನ ಈ ಕಾಲಘಟ್ಟದಲ್ಲಿ, ಸ್ಟಾರ್‌ಗಳು ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಹಬ್ಬವನ್ನು ಆಚರಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.
ವರದಿ : ಲಾವಣ್ಯ ಅನಿಗೋಳ