ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು, ಹೋರಾಟದ ಹಾದಿ ತುಳಿದಿದ್ದಾರೆ. ಆಗಸ್ಟ್ 12 ರಿಂದ 3 ದಿನಗಳ ಕಾಲ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. 2025ರಿಂದ ಅನ್ವಯವಾಗುವಂತೆ, 10 ಸಾವಿರ ರೂಪಾಯಿ ಗೌರವ ಧನಕ್ಕೆ ಪಟ್ಟು ಹಿಡಿದಿದ್ದಾರೆ.
ಎಐಯುಟಿಯುಸಿ ನೇತೃತ್ವದಲ್ಲಿ, ಬೆಂಗಳೂರಿನಲ್ಲೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. 15-16 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ಕೊರೊನಾ ವೇಳೆಯೂ ಕೆಲಸ ಮಾಡಿದ್ದೇವೆ. ಡಬ್ಲ್ಯುಹೆಚ್‌ಒ ನಮಗೆ ಗ್ಲೋಬಲ್ ಲೀಡರ್ಸ್ ಅಂತಾ ಬಿರುದು ಕೊಟ್ಟಿದ್ದಾರೆ. ಇದಕ್ಕಿಂತ ಮಾನದಂಡ ಬೇಕಾ?.
ಇದೊಂದು ಪ್ರಜಾಪ್ರಭುತ್ವ ಸರ್ಕಾರ ಅಂತಾ ಹೇಳ್ತೇವೆ. ಇಲ್ಲಿ ಬಂದಿರುವ ಎಲ್ಲರಿಗೂ ನೋಟಿಸ್ ಬಂದಿದೆ. ಇದಕ್ಕೆ ಜಗ್ಗದೇ ಆಶಾ ಕಾರ್ಯಕರ್ತೆಯರೆಲ್ಲಾ ಹೋರಾಟಕ್ಕೆ ಬಂದಿದ್ದಾರೆ. ಯಾರು ಬೇಕಾದ್ರೂ ಹೋರಾಟ ಮಾಡಬಹುದು ಅಂತಾ ಹೇಳ್ತಾರೆ. ರಾಹುಲ್ ಗಾಂಧಿಯವರೇ ಹೋರಾಟ ಮಾಡಿದ್ದಾರೆ. ನಮ್ಮ ಆಶಾ ಕಾರ್ಯಕರ್ತೆಯರು ಅನ್ಯಾಯದ ವಿರುದ್ಧ ಹೋರಾಟ ಮಾಡ್ತಿದ್ರೆ, ಸಂಬಳ ಕಟ್ ಮಾಡೋದಾಗಿ ಬೆದರಿಕೆ ಹಾಕಿಸುತ್ತಾರೆ. ಇಲಾಖೆ ಅಧಿಕಾರಿಗಳ ಮೂಲಕ ಹೆಸರಿಸೋದು ಸರೀನಾ ಅಂತಾ, ಎಐಯುಟಿಯುಸಿ ಮುಖಂಡೆಯೊಬ್ರು ಪ್ರಶ್ನಿಸಿದ್ರು.
ಇನ್ನು, ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿದ್ರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತೆಯರು ಜಮಾಯಿಸಿದ್ದು, ಬೇಡಿಕೆಗಳ ಈಡೇರಿಕೆಗೆ ಘೋಷಣೆ ಕೂಗಿ ಆಗ್ರಹಿಸಿದ್ರು. ಬೇಡಿಕೆ ಈಡೇರಿಸದಿದ್ರೆ, ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವಾಗಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಆಶಾಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ, ಇಡಿಗಂಟು ನೀಡಬೇಕೆಂದು ಒತ್ತಾಯಿಸಿದ್ದಾರೆ.