ಸಿಎಂ ಸಿದ್ದರಾಮಯ್ಯಗೆ ಆಪ್ತರಿಂದಲೇ ಕಂಟಕ ಎದುರಾಗಿದೆ. ನಾಗೇಂದ್ರ, ರಾಜಣ್ಣ ಬಳಿಕ ಈಗ ಮಾಜಿ ದೋಸ್ತ್ ಸಿ.ಎಂ. ಇಬ್ರಾಹಿಂ ಅವರ ಸರದಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ, ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ರು. ಆ ಚುನಾವಣೆಯಲ್ಲಿ ನಾವು ಸಿದ್ದು ಪರವಾಗಿ 3 ಸಾವಿರ ಮತಗಳನ್ನು ಖರೀದಿಸಿದ್ವಿ. ಹೀಗಂತ ಇತ್ತೀಚೆಗೆ ಸಿ.ಎಂ ಇಬ್ರಾಹಿಂ ಅವರು ಹೇಳಿಕೆ ನೀಡಿದ್ರು. ಈ ಹೇಳಿಕೆ ಬೆನ್ನಲ್ಲೇ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಅವರು ತನಿಖೆಗೆ ಒತ್ತಾಯಿಸಿದ್ದಾರೆ.
ಬಾದಾಮಿಯಲ್ಲಿ ಎಲೆಕ್ಷನ್‌ಗೆ ನಿಂತ್ರೆ ಸೋಲ್ತೀಯಾ ಅಂತಾ ನಾನೇ ಹೇಳಿದ್ದೆ. ನಾನು ಕರೆದುಕೊಂಡು ಹೋಗಿ ಚಿಮ್ಮನಕಟ್ಟಿಗೆ ಕೈ ಮುಗಿದೆ. ಇವನು ಸೋತ್ರೆ ನಮಗೆಲ್ಲಾ ಕಷ್ಟ ಆಗುತ್ತೆ. ಏನಾದ್ರೂ ಮಾಡು ಅಂದೆ. ಚಿಮ್ಮನಕಟ್ಟಿ ನಮ್ಮ ಜೊತೆ ಇದ್ದವನು. ಎಲ್ಲರಿಗಿಂತ ಸೀನಿಯರ್. ಅವನು ಒಪ್ಪಲೇ ಇಲ್ಲ. ಆಗ ಅವರ ಪತ್ನಿ ಹೇಳಿದ್ರು. ಸಿದ್ದರಾಮಯ್ಯ ಬರುತ್ತಾನಂತೆ ಬರಲಿ ಬಿಡಿ ಅಂದ್ರು.
ಸಿದ್ದರಾಮಯ್ಯ 30 ಸಾವಿರದಲ್ಲಿ ಗೆಲ್ತೀನಿ ಅಂದ್ರು. ಮಹದೇವಪ್ಪ 40 ಸಾವಿರದಲ್ಲಿ ಗೇಲ್ತೀವಿ ಅಂದ್ರು. ಆಗ ನೀನೇ ಮೊದಲು ಸೋಲ್ತೀಯಾ ಅಂದೆ. ಬಳಿಕ ಆಗೆಯೇ ಆಯ್ತು. ಮತಎಣಿಕೆ ವೇಳೆ ಎಲ್ಲರೂ ಟೆನ್ಶನ್ ಆಗಿದ್ರು. ನೀನು ಹೇಳಿದಂತೆ ಆಯ್ತಲ್ಲಾ ಅಂದ್ರು. ನೀನು ಗೆಲ್ತೀಯಾ ಅಂತಾ ಸಿದ್ದರಾಮಯ್ಯಗೆ ಹೇಳಿದೆ. 800-1000ದಿಂದ ಗೆಲ್ತೀಯಾ. ನಾನು ಮ್ಯಾನೇಜ್ ಮಾಡಿದ್ದೀನಿ ಅಂದೆ. ಬಳಿಕ ಚಿಮ್ಮನಕಟ್ಟಿ, ನಾನು, ಸಾಲ ತಗೊಂಡು 3 ಸಾವಿರ ವೋಟ್ ಖರೀದಿ ಮಾಡಿದ್ವಿ. ಸಿಎಂ ಆದ 6 ತಿಂಗಳ ಬಳಿಕ ದುಡ್ಡು ಕೊಟ್ಟ. ಹೀಗಂತ ಕಳೆದ ಆಗಸ್ಟ್ ತಿಂಗಳಲ್ಲಿ ಮೈಸೂರಿನ ಸಮಾರಂಭವೊಂದ್ರಲ್ಲಿ ಇಬ್ರಾಹಿಂ ಹೇಳಿದ್ರು.
ಇಬ್ರಾಹಿಂ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ನಾಯಕ ಲಹರ್ ಸಿಂಗ್, ಮತಗಳ್ಳತನ ಆರೋಪ ಮಾಡಿರುವ ಕಾಂಗ್ರೆಸ್ ವಿರುದ್ಧವೇ ಪ್ರಯೋಗಿಸಿದೆ. ಭಾರತೀಯ ಚುನಾವಣಾ ಆಯೋಗಕ್ಕೆ ಲಹರ್ ಸಿಂಗ್ ಪತ್ರವನ್ನು ಬರೆದಿದ್ದಾರೆ. ಇಬ್ರಾಹಿಂ ಹೇಳಿಕೆ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ಪತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
2018ರಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯನವರು 67,599 ಮತಗಳನ್ನು ಪಡೆದಿದ್ರು. ಬಿಜೆಪಿಯ ಶ್ರೀರಾಮುಲು ವಿರುದ್ಧ ಕೇವಲ 1,696 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ರು. ಈ ಗೆಲುವಿನ ರಹಸ್ಯ ಈಗ ಚುನಾವಣಾ ಆಯೋಗದ ಮೆಟ್ಟಿಲು ಹತ್ತಿದೆ.




