ಧರ್ಮಸ್ಥಳ ತನಿಖೆಯ ವಿರುದ್ಧ ಬಿಜೆಪಿ ಸಂಸದ ಈರಣ್ಣ ಕಡಾಡಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ ಸಿಗದೆ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಬೇಕು. ತನಿಖೆ ನಿಲ್ಲಿಸುವಂತೆ ಒತ್ತಾಯಿಸಿ, ಎಸ್‌ಐಟಿ ಮೇಲೆ ಈರಣ್ಣ ಕಡಾಡಿ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳದ ಕುರಿತಾದ ತನಿಖೆ ಮತ್ತು ಪ್ರಚೋದಕ ಮಾತುಗಳನ್ನು ಖಂಡಿಸುತ್ತೇನೆ. ಎಸ್‌ಐಟಿ ತನಿಖೆಯು ಉದ್ದೇಶಪೂರ್ವಕವಾಗಿದೆ. ಹಿಂದೂ ಧಾರ್ಮಿಕ ಕೇಂದ್ರಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದ್ದಾರೆ.
ಕರ್ನಾಟಕದ ಶ್ರದ್ಧಾ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಅನಾಮಿಕ ವ್ಯಕ್ತಿಯನ್ನು ಕರೆದುಕೊಂಡು ಎಷ್ಟು ದಿನ ನೆಲ ಅಗೆಯುತ್ತಾರೆ? ಈ ನಾಟಕವನ್ನು ತಕ್ಷಣ ನಿಲ್ಲಿಸಿ, ಆತನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಯಾವುದೇ ರಾಜಕೀಯ ಪ್ರೇರಣೆ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖೆಯ ಹಿಂದೆ ಕಾಣದ ಕೈಗಳಿವೆ. ಅವರೇನು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ಸರ್ಕಾರ ರಚಿಸಿದ ಎಸ್‌ಐಟಿ ತನಿಖೆಯಿಂದ ಯಾವುದೇ ಸ್ಪಷ್ಟ ಫಲಿತಾಂಶ ಬಂದಿಲ್ಲ. ಪ್ರತಿದಿನ ಅನಾಮಿಕ ವ್ಯಕ್ತಿಯು ಹೊಸ ಕಥೆ ಕಟ್ಟುತ್ತಿದ್ದಾನೆ. ಈತನ ವಿರುದ್ಧ ಕಾನೂನು ಕ್ರಮ ಕೈಗೊಂಡು ಧರ್ಮಸ್ಥಳದ ಮೇಲೆ ಬಂದಿರುವ ಕಳಂಕವನ್ನು ತೊಡೆದು ಹಾಕಬೇಕು ಎಂದು ಈರಣ್ಣ ಕಡಾಡಿ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.