ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ರಾಜಕೀಯ ರೂಪ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳ ನಾಯಕರ ಹೇಳಿಕೆಗಳು ತಿರುಗೇಟುಗಳು ಜೋರಾಗುತ್ತಿವೆ. ಬಿಜೆಪಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಯನ್ನು ಸಹ ಮಾಡಲಾಗಿದೆ. ಇದೀಗ ಧರ್ಮಸ್ಥಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಿಂದೆ ಟಿಪ್ಪು ಗ್ಯಾಂಗ್ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಿಂದೆ ಟಿಪ್ಪು ಗ್ಯಾಂಗ್ ಇದೆ, ಟಿಪ್ಪು ಜಯಂತಿ ಆಚರಿಸದರಲ್ಲ, ಅದೇ ರೀತಿ ಗ್ಯಾಂಗ್ ವೊಂದರಿಂದ ಒತ್ತಡ ಬಂದಿದೆ. ಯಾವನೋ ಅನಾಮಿಕ ಕೊಟ್ಟ ದೂರಿನಿಂದ ದೊಡ್ಡದು ಮಾಡಿದ್ದಾರೆ, ನೂರಾರು ಕೊಲೆಗಳು, ಅತ್ಯಾಚಾರಗಳು ಆಗಿವೆ ಎಂಬಂತೆ ಬಿಂಬಿಸಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮಾಡಿದ್ದಾರೆ ಎಂಬಂತೆ ಬಿಂಬಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ ಪಿ, ಡಿಸಿಗೆ ಸಾವಿರ ದೂರುಗಳು ಬರುತ್ತವೆ. ಆ ಎಲ್ಲಾ ದೂರುಗಳಿಗೂ ಎಸ್ ಐಟಿ ರಚಿಸುತ್ತಾರಾ? ಮುಸುಕುದಾರಿಗೆ ಹಣ ಕೊಟ್ಟು ಕರೆದುಕೊಂಡು ಬಂದಿರುವ ಹಾಗಿದೆ. ಧರ್ಮಸ್ಥಳದ ಮಂಜುನಾಥ ದೇವರಿಗೆ ಅವಹೇಳನ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಈ ಆರೋಪಗಳನ್ನು ತೀವ್ರವಾಗಿ ಖಂಡಿಸಿರುವ ಹಿಂದೂ ಧರ್ಮಸ್ಥಳದ ಅನುಯಾಯಿಗಳು ಹಾಗೂ ವಿವಿಧ ಹಿಂದುಳಿದ ಜಾತಿ ಸಂಘಟನೆಗಳು, ಧರ್ಮಸ್ಥಳದ ಹೆಗ್ಗಡೆ ಕುಟುಂಬದ ಮೇಲೆ ಆರೋಪ ಮಾಡುವ ಮೂಲಕ, ರಾಜ್ಯದ ಶ್ರದ್ಧಾ ಕೇಂದ್ರಗಳ ವಿರುದ್ಧ ಜನರಲ್ಲಿ ಸಂಶಯ ಸೃಷ್ಟಿಸಲು ಪ್ರಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ