Political News: ಹುಬ್ಬಳ್ಳಿ: ಶಾಲೆಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದ 1100 ಶಾಲೆಗಳಿಗೆ ಬಣ್ಣ ಹಚ್ಚಲು ಯೋಜನೆ ರೂಪಿಸಲಾಯಿತು. ಇದಕ್ಕಾಗಿ ಸುಮಾರು ರೂ. 60 ಕೋಟಿ ಹಣ ವ್ಯಯವಾಗಲಿದೆ. ಈಗಾಗಲೇ ಸುಮಾರು 800 ಶಾಲೆಗಳಿಗೆ ಬಣ್ಣ ಹಚ್ಚಲಾಗಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ ಜೋಶಿ ಹೇಳಿದರು.
ಇಂದು ಛಬ್ಬಿ ಗ್ರಾಮದ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ನೂತನ ಸರಕಾರಿ ಪ್ರೌಢಶಾಲೆಯ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.
ಛಬ್ಬಿ ಗ್ರಾಮಕ್ಕೆ ವಿಶೇಷ ಅನುದಾನದ ಮೂಲಕ ಪ್ರೌಢಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಸುಮಾರು 400 ಶಾಲೆಗಳನ್ನು ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. 31,600 ಡೆಸ್ಕಗಳನ್ನು ವಿತರಿಸಲಾಗಿದೆ. 106 ಅಂಗನವಾಡಿ, ಶೌಚಾಲಯ, ಭೋಜನಾಲಯಗಳನ್ನು ಕಟ್ಟಿಸಲಾಗಿದೆ. 200 ಕ್ಕೂ ಹೆಚ್ಚು ಸ್ಮಾರ್ಟ್ ಕ್ಲಾಸ್ ತೆರೆಯಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕು. ಅತಿಹೆಚ್ಚು ಯುವಕರನ್ನು ಭಾರತ ದೇಶ ಹೊಂದಿದೆ ಎಂದರು.
ಭಾರತ ದೇಶದ ಜಿಡಿಪಿ ಬೆಳವಣಿಗೆ ಆಗುತ್ತಿದೆ. ಸ್ವದೇಶದಲ್ಲಿಯೇ ಜಗತ್ತಿನ ಶೇ.30 ರಷ್ಟು ಮೊಬೈಲ್ ಗಳು ತಯಾರಾಗುತ್ತಿವೆ. ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದೆ. 1.10 ಲಕ್ಷ ಮೆಡಿಕಲ್ ಸೀಟ್ ಗಳಿವೆ. ಇನ್ನೂ 75 ಸಾವಿರ ಹೊಸ ಮೆಡಿಕಲ್ ಸೀಟ್ ಗಳಿಗೆ ಅವಕಾಶ ಕಲ್ಪಿಸಲಾಗುವುದು. ಐಐಟಿ, ಐಐಐಟಿ ಸಂಸ್ಥೆಗಳಿಂದ ಹೆಚ್ಚಿನ ಜ್ಞಾನ ದೊರೆಯಲಿದೆ. ದೇಶದ ಆರ್ಥಿಕತೆ ಬೆಳೆಯುತ್ತಿದೆ. ಬೇರೆ ದೇಶದವರು ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಮಾತನಾಡಿ, ಹೆತ್ತ ತಂದೆ ತಾಯಿಯನ್ನು ಮೊದಲು ಗೌರವಿಸಬೇಕು. ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕಾಗುತ್ತದೆ. ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸುಮಾರು 40 ವರ್ಷದ ಬಳಿಕ ಛಬ್ಬಿ ಗ್ರಾಮದಲ್ಲಿ ಪ್ರೌಢಶಾಲೆ ನಿರ್ಮಾಣ ಮಾಡಲಾಗಿದೆ. ವಿಶೇಷ ಕಾಳಜಿ ಮೂಲಕ ಗ್ರಾಮಕ್ಕೆ ಪ್ರೌಢಶಾಲೆ ಬಂದಿದೆ. ದೇವಸ್ಥಾನದ ಘಂಟೆಗಿಂತ ಶಾಲೆಯ ಘಂಟೆಗಳು ಜಾಸ್ತಿ ಶಬ್ಧ ಮಾಡಬೇಕು. ರಾಜ್ಯದಲ್ಲಿ ಶಿಕ್ಷಕರು, ಶಾಲಾ ಕಟ್ಟಡಗಳ ಕೊರತೆಯಿದೆ. ಪ್ರಸಕ್ತ ಸಾಲಿನಲ್ಲಿ 3000 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆಪಿಎಸ್ ಶಾಲೆ ಮೂಲಕ ಮಕ್ಕಳು ಒಂದನೇ ತರಗತಿಯಿಂದ 12 ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಅಧ್ಯಯನ ಮಾಡಬಹುದು. ರಾಜ್ಯದ 6500 ಗ್ರಾಮ ಪಂಚಾಯತಿಗಳಿಗೆ ಒಂದು ಕೆಪಿಎಸ್ ಶಾಲೆ ಸ್ಥಾಪನೆ ಆಗಬೇಕು. 4,000 ಶಾಲೆಗಳಿಗೆ ದ್ವಿಭಾಷೆ ಅಳವಡಿಸಲಾಗುತ್ತಿದೆ. 5,000 ಎಲ್ ಕೆಜಿ, ಯುಕೆಜಿ ಶಾಲೆ ತೆರೆಯಲಾಗುವುದು. 25 ಸಾವಿರ ಮಕ್ಕಳಿಗೆ ಉಚಿತವಾಗಿ ನೀಟ್, ಜೆಇಇ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಶೇ.20 ರಿಂದ 25 ರಷ್ಟು ಸಾಕ್ಷರತೆ ಹೊಂದಲಾಗಿತ್ತು. ಇಂದು ಸುಮಾರು ಶೇ.75 ರಷ್ಟು ಸಾಕ್ಷರತೆ ಸಾಧಿಸಲಾಗಿದೆ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ದೇಶವು 145 ಕೋಟಿ ಜನರಿಗೆ ಸೇರಿದ್ದಾಗಿದೆ. ಭಗವಾನ್ ಬುದ್ಧ ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದಾನೆ. ಮಹಾನ ಮಾನವತಾವಾದಿ ಬುದ್ಧನನ್ನು ನೆನೆಯಬೇಕಿದೆ. ಅವರ ವಿಚಾರಗಳನ್ನು ನಾವು ಅಳವಡಿಸಿಕೊಳ್ಳಬೇಕು. ಬುದ್ಧ, ಬಸವ, ಅಂಬೇಡ್ಕರ ಅವರ ಮಾರ್ಗದಲ್ಲಿ ನಾವು ಕೂಡ ಸಾಗಬೇಕಿದೆ. ಎಲ್ಲರಿಗೂ ಸಮಪಾಲು ಸಮಬಾಳು ಸಿಗಬೇಕು. ಎಲ್ಲರನ್ನೂ
ಗೌರವದಿಂದ ಕಾಣಬೇಕು. ದೇಶದ ಏಕತೆ ಎಂದೂ ಅಳಿಯುವುದಿಲ್ಲ. 93 ಸಾವಿರ ಶಾಲೆಗಳು ದೇಶದಲ್ಲಿ ಬಂದ್ ಆಗಿವೆ. ಶೇ. 87 ರಷ್ಟು ಯುವಕರಿಗೆ ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ. ದೇಶದಲ್ಲಿರುವ ಪರಿಸ್ಥಿತಿಯನ್ನು ಇದ್ದ ಹಾಗೆ ಹೇಳಬೇಕು. ದೇಶದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜನರು ಮುಂದಾಗಬೇಕು.
ಸಮಾಜದಲ್ಲಿ ಬದಲಾವಣೆ ಆಗಬೇಕಿದ್ದರೆ ಮೊದಲು ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಭಾತೃತ್ವ, ಸಹೋದರತೆಯಿಂದ ಎಲ್ಲರೂ ಒಗ್ಗಟ್ಟಾಗಿ ಇರೋಣ ಎಂದು ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಮಾತನಾಡಿ, ಮನುಷ್ಯರು ಸಂಕಲ್ಪ ಮಾಡಿದರೆ ಯಾವುದೇ ಕೆಲಸವನ್ನು ಸಾಧಿಸಬಹುದು. ಛಬ್ಬಿ ಗ್ರಾಮದ ಜನರು ಛಲ ಬಿಡದೇ ಗ್ರಾಮಕ್ಕೆ ಅವಶ್ಯವಿದ್ದ ಸರ್ಕಾರಿ ಪ್ರೌಢಶಾಲೆಯನ್ನು ನಿರ್ಮಾಣ ಮಾಡಿಸಿಕೊಂಡಿದ್ದಾರೆ. ಆರ್. ಅಶೋಕ್ ಹಾಗೂ ನಾನು ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಗ್ರಾಮದ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದವು. ಶಾಲಾ ಕಟ್ಟಡ ನಿರ್ಮಾಣಕ್ಕೆ ಹಲವಾರು ಜನರು ಶ್ರಮಿಸಿದ್ದಾರೆ. ಜ್ಞಾನ ಮತ್ತು ಧ್ಯಾನ ಬಹಳ ಮುಖ್ಯ. 21 ನೇ ಶತಮಾನದಲ್ಲಿ ಜ್ಞಾನ ಜಗತ್ತನ್ನು ಆಳುತ್ತಿದೆ. ಶಿಕ್ಷಕರ ನೇಮಕಾತಿ ಕಾಲಕಾಲಕ್ಕೆ ಆಗಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ದೇಶದ ಪ್ರಗತಿಗೆ ಶಿಕ್ಷಣ ಅವಶ್ಯಕ. ಎಲ್ಲಾ ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಬೇಕು ಎಂದು ತಿಳಿಸಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ ಮಾತನಾಡಿ, ಕಂದಾಯ ಸಚಿವನಾದಾಗ ಸುಮಾರು 16 ಗ್ರಾಮ ವಾಸ್ತವ್ಯವನ್ನು ಮಾಡಿದ್ದೇನೆ. ವಿಶೇಷವಾಗಿ ಛಬ್ಬಿ ಗ್ರಾಮದ ವಾಸ್ತವ್ಯ ನನಗೆ ಹೆಚ್ಚು ನೆನಪಿನಲ್ಲಿ ಉಳಿದಿದೆ. ಸರ್ಕಾರಿ ಪ್ರೌಢಶಾಲೆಯ ನಿರ್ಮಾಣಕ್ಕೆ ಸಹಾಯಹಸ್ತ ನೀಡಿದ್ದೇನೆ. ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಬೇಕು. ಇದೇ ಗ್ರಾಮದಲ್ಲಿ ಕಾಲೇಜು ನಿರ್ಮಾಣವಾಗಲಿ ಎಂದು ಆಶಿಸಿದರು.
ಶಾಸಕರಾದ ಎಂ.ಆರ್.ಪಾಟೀಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅಜಿತ ಹನುಮಕ್ಕನವರ, ಚಲನಚಿತ್ರ ನಟಿ ಸಪ್ತಮಿ ಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಜೆ.ಬಿ.ಮಜ್ಜಗಿ, ಡಿಡಿಪಿಐ ಎಸ್.ಎಸ್.ಕೆಳದಿಮಠ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಛಬ್ಬಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರವಿ ಹುಲ್ಲಂಬಿ, ಸದಸ್ಯರು, ಛಬ್ಬಿ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಪೂಜಾರಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.