Hubli News: ಹುಬ್ಬಳ್ಳಿ: ರಾಜ್ಯದಲ್ಲಿ ಎನ್.ಇ.ಪಿ. ಗೆ ಅವಕಾಶ ಇಲ್ಲ. ಎಸ್.ಇ.ಪಿ ಯನ್ನು ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರುತ್ತೇವೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಪ್ರೌಡ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇರೆಯವರನ್ನು ದ್ವೇಷಿಸುವ ಪಠ್ಯ ನಮಗೆ ಬೇಡ. ದೇಶದ ಬಗ್ಗೆ ಒಳ್ಳೆಯತನ ಹೇಳೊ ಪಠ್ಯ ಬೇಕು. ಪಠ್ಯಪುಸ್ತಕ ಪರಿಷ್ಕರಣೆ ಮಾಡೋದಾಗಿ ಹೇಳಿದ್ದೆವು. ಅದರಂತೆ ಪಠ್ಯ ಪರಿಷ್ಕರಿಸಲಾಗುವುದು ಎಂದು ಹೇಳಿದರು.
ಎನ್.ಇ.ಪಿ. ಯಲ್ಲಿ ಪಠ್ಯ ರಚನೆ ಹಿಡಿತ ಬೇರೆಯವರ ಕೈಗೆ ಹೋಗುತ್ತೆ. ಕನ್ನಡ ರಾಜ್ಯದ ಸಂಸ್ಕೃತಿ, ಪರಂಪರೆ ಇಲ್ಲಿನ ಜನರಿಗೆ ತಿಳುವಳಿಕೆ ಆಗಲಿ. ಕರ್ನಾಟಕ ಆದ ಮೇಲೆ ಪಕ್ಕದ ರಾಜ್ಯ, ದೇಶ ಬರುತ್ತೆ. ಲಗಾಮು ಕೇಂದ್ರದ ಕೈಗೆ ಕೊಟ್ಟರೆ ಅವರು ತಮಗೆ ಬೇಕೆಂತೆ ತಿರುಗಿಸಿಕೊಳ್ತಾರೆ. ನಮ್ಮ ಕುವೆಂಪು, ನಮ್ಮಲ್ಲಿನ ಚರಿತ್ರೆ ಬದಿಗೆ ಸರಿಯುತ್ತದೆ. ನಾವು ಯುಪಿ ಮತ್ತು ಇತರೆ ರಾಜ್ಯದ ಚರಿತ್ರೆ ಓದಬೇಕಾಗುತ್ತದೆ. ಇದನ್ನು ಹತೋಟಿಗೆ ತರೋ ಕೆಲಸ ಮಾಡ್ತೇವೆ. 17500 ಶಿಕ್ಷಕರ ನೇಮಕ ಶೀಘ್ರ ನಡೆಯುತ್ತದೆ. ಒಳ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ನೇಮಕಾತಿ ಪ್ರಕ್ರಿಯೆ ಆಗುತ್ತದೆ ಎಂದರು.