ವಿಧಾನಸಭೆಯಲ್ಲಿ RSS ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಕೊನೆಗೂ ಕ್ಷಮೆಯಾಚಿಸಿದ್ದಾರೆ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ, ತಪ್ಪು ಮಾಡಿದ್ದೇನೆಂದು ಭಾವಿಸಿದ್ರೆ ಕ್ಷಮೆ ಇರಲಿ ಅಂತಾ ಮನವಿ ಮಾಡಿದ್ದಾರೆ.
ಕಳೆದ ಆಗಸ್ಟ್ 22ರಂದು ವಿಧಾನಸಭಾ ಅಧಿವೇಶನದಲ್ಲಿ, ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂಬ ಗೀತೆಯನ್ನ ಡಿಕೆಶಿ ಹಾಡಿದ್ರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದ ಕುರಿತು ಚರ್ಚೆ ನಡೆಯುತ್ತಿದ್ದಾಗ ಗದ್ದಲ ಉಂಟಾಗಿತ್ತು. ಆ ವೇಳೆ ಅಪ್ಪಟ ಕಾಂಗ್ರೆಸ್ಸಿಗ ಡಿಕೆಶಿ ಬಾಯಲ್ಲಿ, RSS ಗೀತೆಯ ಸಾಲುಗಳನ್ನು ಕೇಳಿ, ಇಡೀ ಸದನ ತಬ್ಬಿಬ್ಬಾಗಿತ್ತು. ಇದು ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಹಲವು ನಾಯಕರು ಡಿಕೆಶಿ ನಡೆಯನ್ನು ಖಂಡಿಸಿದ್ರು.
ಬಿ.ಕೆ. ಹರಿಪ್ರಸಾದ್, ಕೆ.ಎನ್. ರಾಜಣ್ಣ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಹೊಳಿ ಸೇರಿ ಹಲವು ನಾಯಕರು ಬಹಿರಂಗವಾಗೆ ಇದಕ್ಕೆ ಆಕ್ರೋಶ ಹೊರಹಾಕಿದ್ರು. ಇದೀಗ ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಡಿಕೆಶಿ, ನಾನೂ ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಅಂತಾ ಟಾಂಗ್ ಕೊಟ್ಟಿದ್ದಾರೆ.
ನನ್ನ ಇತಿಹಾಸ ಬದ್ಧತೆ ಅನುಮಾನಿಸಿದ್ರೆ ಅವರಷ್ಟು ಮೂರ್ಖರಿಲ್ಲ. ಗಾಂಧಿ ಕುಟುಂಬಕ್ಕೂ ನನಗೂ ಭಕ್ತ-ಭಗವಂತನ ಸಂಬಂಧ. ಗಾಂಧಿ ಕುಟುಂಬದ ಮಾರ್ಗದರ್ಶನ ಪಡೆದು ಕೆಲಸ ಮಾಡ್ತೀನಿ. ನಾನು ಬಿಹಾರಕ್ಕೆ ಹೋದಾಗಲೂ ಈ ಬಗ್ಗೆ ಕೇಳಿದ್ರು. ಪಕ್ಷದ ಹಿರಿಯ ನಾಯಕರು ಕೂಡ, ನನಗೆ ಅಡ್ವೈಸ್ ಮಾಡಿದ್ದಾರೆ. ನಾನು ಅವರಿಗಿಂತ ದೊಡ್ಡವನಲ್ಲ. ಯಾರ ಮನಸ್ಸನ್ನು ನೋಯಿಸಲು ನನಗೆ ಇಷ್ಟವಿಲ್ಲ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಇಂಡಿಯಾ ಒಕ್ಕೂಟದ ನಾಯಕರ ಕ್ಷಮೆ ಕೇಳುತ್ತೇನೆ.
ನನಗೆ ಕಮ್ಯೂನಿಸ್ಟ್ ವಿಚಾರ ಮಾತಾಡೋಕೆ ಶಕ್ತಿ ಇದೆ. ವಂದೇ ಮಾತರಂ ಬಗ್ಗೆ ಮಾತಾಡ್ತೀನಿ. ಯದಾ ಯದಾಯಿ ಧರ್ಮಸ್ಯ ಬಗ್ಗೆಯೂ ಮಾತಾಡ್ತೀನಿ. ಭಗವದ್ಗೀತೆ, ಚಾಣಾಕ್ಯ ನೀತಿಯನ್ನೂ ಮಾತಾಡ್ತೀನಿ. ನಾವೆಲ್ಲಾ ಸೇರಿ ಚರ್ಚೆ ಮಾಡೋಣ. ಈಗ ಚರ್ಚೆ ಮಾಡೋದು ಬೇಡ. ಚರ್ಚಿಸುವ ಅಗತ್ಯವೂ ಇಲ್ಲ. ನಾನು ಯಾರನ್ನೂ ನೋಯಿಸುವುದು ಬೇಕಾಗಿಲ್ಲ. ನನ್ನ ಧರ್ಮವನ್ನು ಬಿಡೋದಕ್ಕೆ ನಾನು ತಯಾರಿಲ್ಲ. ನಾನು ಎಲ್ಲಾ ಧರ್ಮವನ್ನು ನಂಬುತ್ತೇನೆ. ಹೀಗಂತ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.