ಧರ್ಮಸ್ಥಳ ಪ್ರಕರಣದ ಕುರಿತಂತೆ ಹಲವಾರು ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಮ್ಮ ಮನದಾಳದ ಮಾತುಗಳನ್ನು ಬಹಿರಂಗ ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಈ ಪತ್ರದಲ್ಲಿ ಅವರು ಶಾಂತಿ, ನೆಮ್ಮದಿ ಮತ್ತು ಭಾವೈಕ್ಯತೆಯ ಸಂದೇಶ ನೀಡಿದ್ದಾರೆ.
ನಂಬಿಕೆ ಕನ್ನಡಿಯಂತದ್ದು. ಒಮ್ಮೆ ಒಡೆದರೆ, ಮತ್ತೆ ಸರಿಪಡಿಸಲಾಗುವುದಿಲ್ಲ. ಒಡೆದ ಕನ್ನಡಿಯ ಪ್ರತಿಯೊಂದು ಚೂರಿನಲ್ಲಿ ಬೇರೆ ಬಿಂಬಗಳು ಕಾಣುತ್ತವೆ. ಅದೇ ರೀತಿ, ಅಸಲಿ ಸತ್ಯವನ್ನು ಬಿಟ್ಟು, ವಿಭಿನ್ನವಾಗಿ ಅರ್ಥೈಸುವುದು ತಪ್ಪು. ಧರ್ಮಸ್ಥಳವನ್ನು ವಿವಾದಿತ ಕೇಂದ್ರವನ್ನಾಗಿಸಲು ಯತ್ನಿಸುವವರು ನಾಡಿನ ಶ್ರದ್ಧೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.
ಶ್ರೀಗಳು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸೇವೆಗಳನ್ನು ಶ್ಲಾಘಿಸಿದ್ದಾರೆ. 1972ರಿಂದಲೂ ಸಾಮೂಹಿಕ ವಿವಾಹಗಳ ಮೂಲಕ ಸಾವಿರಾರು ಕುಟುಂಬಗಳಿಗೆ ಮದುವೆ ಸೌಲಭ್ಯ ಒದಗಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಯೋಜನೆಗಳ ಮೂಲಕ ಗ್ರಾಮೀಣ ಜನರ ಬದುಕನ್ನು ಸಮೃದ್ಧಗೊಳಿಸಿದ್ದಾರೆ. ಇವರ ಕಾರ್ಯ ವೈಖರಿಯೇ ಭಾವೈಕ್ಯತೆಗೆ ನಿಜವಾದ ಕನ್ನಡಿ ಎಂದು ಶ್ರೀಗಳು ಹೊಗಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವಿನ ಪ್ರಕರಣಗಳು ಗಂಭೀರವಾದವು ಆಗಿರಬಹುದು. ಆದರೆ, ಅವನ್ನು ನೇರವಾಗಿ ಕ್ಷೇತ್ರದೊಂದಿಗೆ ಜೋಡಿಸುವುದು ದುಡುಕಿನ ನಿರ್ಧಾರ. ಆದ್ದರಿಂದ, ಸರ್ಕಾರ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಅನಾವರಣ ಮಾಡಬೇಕು. ಈಗಾಗಲೇ ವಿಶೇಷ ತನಿಖಾ ತಂಡ ರಚನೆಯಾಗಿದೆ. ಸತ್ಯ ಸದಾ ಮೌನಿ, ಸುಳ್ಳಿಗೆ ಆರ್ಭಟ ಜಾಸ್ತಿ. ಶ್ರದ್ಧಾವಂತ ಭಕ್ತರ ಮನಸ್ಸಿಗೆ ಯಾವುದೇ ರೀತಿಯ ಧಕ್ಕೆಯಾಗಬಾರದು. ಅವರು ಭಕ್ತರಿಗೆ ಹಾರೈಸಿದ್ದು, ಎಲ್ಲ ಕಾರ್ಮೋಡಗಳು ಕರಗಿ ಶಾಂತಿ-ನೆಮ್ಮದಿ ನೆಲೆಸಲಿ ಎಂದು ಪತ್ರದ ಮೂಲಕ ಹೇಳಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ