ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ನಂತರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಿಂದೂ ದೇವಾಲಯಗಳನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದರು.
ಅಶೋಕ್ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆ ಬುದ್ದಿ ಕೊಡಲಿ, ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುವ ಮನಸ್ಥಿತಿ ತಲಗಿಸಲಿ, ಹಿಂದೂಗಳ ಭಾವನೆಗೆ ಧಕ್ಕೆ ತರದಂತೆ ತಾಯಿಯ ಬುದ್ದಿ ಕೊಡಲಿ ಎಂದು ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರುತ್ತ, ಹಿಂದೂ ದೇವಾಲಯಗಳನ್ನು ಪದೇ ಪದೇ ಗುರಿಯಾಗಿಸುತ್ತಿದ್ದಾರೆ. ನಿಮಗೆ ಧೈರ್ಯ ಇದ್ದರೆ ಮಸೀದಿಗಳ ಮುಂದೆ ಹೋಗಿ, ಅದು ಮುಸ್ಲಿಮರದ್ದು ಅಲ್ಲ ಎಂದು ಹೇಳಿ. ಚುನಾವಣೆ ವೇಳೆ ಓಟು ರಾಜಕಾರಣ ಮಾಡಿ, ಮುಸ್ಲಿಮರ ಮೆಚ್ಚುಗೆ ಪಡೆಯಿರಿ. ಆದರೆ ಈಗ ಯಾಕೆ ಹಿಂದೂಗಳ ಮೇಲೆ ರಾಜಕಾರಣ? ಎಂದು ಪ್ರಶ್ನಿಸಿದರು.
ಅಶೋಕ್ ಅವರು ಮುಂದುವರೆದು, ನಾಳೆ ನಡೆಯಲಿರುವ ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎಲ್ಲ ಹಿಂದೂಗಳು ಒಗ್ಗಟ್ಟಾಗಿ ಬರಬೇಕೆಂದು ಕರೆ ಕೊಟ್ಟರು.ಚಾಮುಂಡೇಶ್ವರಿ ದೇವಾಲಯವನ್ನು ಟೂಲ್‌ಕಿಟ್ ಆಗಿ ಬಳಸಿದರೆ ಹಿಂದೂಗಳು ಸಹಿಸುವುದಿಲ್ಲ. ಕಾಂಗ್ರೆಸ್‌ನ ಅವನತಿ ಚಾಮುಂಡೇಶ್ವರಿಯಿಂದಲೇ ಆರಂಭವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮೈಸೂರು ದಸರಾ ಉದ್ಘಾಟಕರಾಗಿ ಭಾನು ಮುಸ್ತಾಕ್ ಅವರ ಆಯ್ಕೆಯ ವಿಚಾರದಲ್ಲಿ ಅಶೋಕ್ ಗರಂ ಆಗಿ ಮಾತನಾಡಿದರು. ಮುಷ್ತಾಕ್ ಯಾರು? ಯಾವಕ್ಕಾನೂ ಗೊತ್ತಿಲ್ಲ. ದಸರಾ ಸಾವಿರಾರು ವರ್ಷಗಳ ಸಂಪ್ರದಾಯ. ಇಲ್ಲಿ ಬರುವವರು ಮೊದಲು ಚಾಮುಂಡೇಶ್ವರಿ ತಾಯಿ ಪೂಜಿಸುತ್ತಾರೆ. ಭಾನು ಮುಸ್ತಾಕ್ ಕನ್ನಡ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಭುವನೇಶ್ವರಿಯನ್ನು ಒಪ್ಪದವರು ಚಾಮುಂಡೇಶ್ವರಿಯನ್ನು ಹೇಗೆ ಒಪ್ಪುತ್ತಾರೆ? ಕನ್ನಡಿಗರ ಭಾವನೆಗೆ ಧಕ್ಕೆ ತಂದವರು ಮೊದಲು ಕ್ಷಮೆ ಕೇಳಬೇಕು. 6 ಕೋಟಿ ಹಿಂದೂಗಳಲ್ಲಿ ಒಬ್ಬ ಸಾಧಕ ಸಿಗಲಿಲ್ಲವೇ? ಕನ್ನಡಕ್ಕೆ ಗೌರವ ತೋರದವರನ್ನೇ ಕರೆಯಬೇಕಿತ್ತಾ? ಎಂದು ಪ್ರಶ್ನಿಸಿದರು.
ಈ ವೇಳೆ, ಹಿಂದೆ ನಿಸಾರ್ ಉದ್ಘಾಟನೆ ಮಾಡಿದ್ದಾರಲ್ಲಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್, ನಿಸಾರ್ ಎಲ್ಲರನ್ನೂ ಗೌರವಿಸುತ್ತಿದ್ದರು. ಅವರು ತಾಯಿಗೆ ನಿತ್ಯೋತ್ಸವ ಎಂದೇ ಬರೆದಿದ್ದರು. ಆದರೆ ಭಾನು ಮುಸ್ತಾಕ್ ಧ್ವಜದ ಬಗ್ಗೆ ಮಾತನಾಡಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ. ಇದು ದೊಡ್ಡ ವ್ಯತ್ಯಾಸ” ಎಂದು ತಿರುಗೇಟು ನೀಡಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ