ರಾಜ್ಯದಲ್ಲಿ ಮತ್ತೊಂದು ಭಯಾನಕ ಹತ್ಯೆ ನಡೆದಿದೆ. ಮನೆಯಲ್ಲಿ ಜಗಳವಾಡಿದ ವಿವಾದ, ಕೊನೆಗೆ ಕ್ರೂರ ಹತ್ಯೆಯ ರೂಪವನ್ನು ಪಡೆದುಕೊಂಡಿದೆ. ಪತ್ನಿ ಮಂಚಕ್ಕೆ ಬರಲು ನಿರಾಕರಿಸಿದ್ದಕ್ಕೆ ಪತಿ ಆಕೆಯ ಕತ್ತು ಸೀಳಿ ಜೀವವನ್ನೇ ತೆಗೆದಿದ್ದಾನೆ. ಈ ಘಟನೆ ರಾಜ್ಯದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದೇಸಾಯಿ ಬೋಗಾಪುರ ಗ್ರಾಮದಲ್ಲಿ ನಡೆದಿದೆ
ದೇಶಾಯಿ ಬೋಗಾಪುರ ಸಣ್ಣ ಹಳ್ಳಿ. ಆದರೆ ಶನಿವಾರ ರಾತ್ರಿ, ಇಲ್ಲಿ ನಡೆದ ಕ್ರೂರ ಘಟನೆ ಗ್ರಾಮಸ್ಥರನ್ನೇ ಬೆಚ್ಚಿ ಬೀಳಿಸಿದೆ. 31 ವರ್ಷದ ಗಂಗಮ್ಮ, ತಮ್ಮ ಗಂಡ ಯಲ್ಲಪ್ಪನ ಕೈಯಲ್ಲಿ ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ಈ ಜೋಡಿಯ ಮೂವರು ಮಕ್ಕಳು ಈಗ ತಾಯಿಯಿಲ್ಲದ ಶೋಕದಲ್ಲಿ ಮುಳುಗಿದ್ದಾರೆ.
ಯಲ್ಲಪ್ಪ ಮತ್ತು ಗಂಗಮ್ಮ 2012ರಲ್ಲಿ ಮದುವೆಯಾದ ದಂಪತಿ. ಮದುವೆಯಾದ ನಂತರ ಗಂಗಮ್ಮ ತನ್ನ ತವರು ಮನೆದಲ್ಲಿಯೇ ಗಂಡನೊಂದಿಗೆ ವಾಸಿಸುತ್ತಿದ್ದರು. ಈ ದಂಪತಿಗೆ ಮೂವರು ಮಕ್ಕಳು ಇದ್ದರು. ಆದರೆ ಮನೆಯೊಳಗಿನ ಅಸಮಾಧಾನ. ಯಾವಾಗಲು ಇವರಿಬ್ಬರು ಜಗಳವಾಡುತ್ತಿದ್ದರು. ಶನಿವಾರವೂ ಅದೆ ರೀತಿಯ ವಾಗ್ವಾದ ನಡೆದಿದೆ. ಈ ಬಾರಿ ಗಂಡನ ಕ್ರೂರತೆ ಮಿತಿಮೀರಿತ್ತು.
ಪತ್ನಿ ಮಂಚಕ್ಕೆ ಬರಲು ನಿರಾಕರಿಸಿದಕ್ಕೆ ಕೋಪಗೊಂಡ ಪತಿ, ಮನೆಯಲ್ಲಿದ್ದ ಕುಡುಗೋಲಿನಿಂದ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಮಸ್ಕಿ ಪೊಲೀಸರು ಧಾವಿಸಿದ್ದಾರೆ. ಮೃತದೇಹವನ್ನು ಶವ ಪರೀಕ್ಷೆಗೆ ಕಳಿಸಿದ್ದು, ಆರೋಪಿ ಯಲ್ಲಪ್ಪನನ್ನು ಬಂಧಿಸಲಾಗಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಾವಣ್ಯ ಅನಿಗೋಳ