ಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ವಾಗ್ವಾದಗಳು ಜೋರಾಗಿವೆ. ಧರ್ಮಸ್ಥಳದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಎಸ್‌ಐಟಿ ತನಿಖೆಗೆ ಕೊಟ್ಟಾಗಲೇ ಹಿಂದೂ ಧರ್ಮದ ವಿರೋಧಿಗಳಾಗಿರುವುದು ಗೊತ್ತಾಗಿದೆ. ನಿಮ್ಮ ಸರ್ಕಾರ ಬಂದ ಇಷ್ಟು ವರ್ಷದಲ್ಲಿ, ಮಸೀದಿಯಲ್ಲಿ ತಲೆ ಬುರುಡೆ, ಕಾಲು ಮೂಳೆ, ಕೈ ಮೂಳೆ, ಬೆರಳು ಮೂಳೆ ಸಿಕ್ಕಿದೆ ಅಂತಾ ತನಿಖೆಗೆ ಒಪ್ಪಿಸಿದ್ದೀರಾ? ಒಂದ್ಕಡೆ ಟಿಪ್ಪು ಜಯಂತಿ ಮಾಡ್ತೀರಾ? ಧರ್ಮಸ್ಥಳ, ಚಾಮುಂಡೇಶ್ವರಿಯನ್ನು ಅಪವಿತ್ರ ಮಾಡ್ತೀರಾ. ಯಾವ ಕಾರಣಕ್ಕೆ ನಿಮ್ಮನ್ನು ಜಾತ್ಯಾತೀತರು ಧರ್ಮಾತೀತರು ಅಂತಾ ಕರೀಬೇಕು.
ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ನಿಲ್ಲಬೇಕು. ಅದಕ್ಕಾಗಿ ಹೋರಾಡುತ್ತೇವೆ. ಬರೀ ಸಿದ್ದರಾಮಯ್ಯನವರೇ ಸರ್ಕಾರ ನಡೆಸಿದ್ರೆ, ಅವರೇ ಬುದ್ಧಿವಂತರು ಅಂತಾ ತಿಳಿದುಕೊಳ್ಳಬೇಕಿತ್ತು. ಆದರೆ ನಾವೂ ಸರ್ಕಾರ ನಡೆಸಿದ್ದೇವೆ. ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಇದರ ವ್ಯಾಪ್ತಿ ಕರ್ನಾಟಕ ಬಿಟ್ಟು ಆಚೆ ಹೋಗಿದೆ. ತಮಿಳುನಾಡು, ಕೇರಳ, ದಿಲ್ಲಿ, ಪಾಕಿಸ್ತಾನ, ಅಲ್ಜೀರಾ, ಬಿಬಿಸಿಗೆ ಹೋಗಿದೆ. ಈ ಜಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯಿಂದಲೇ ಆಗಬೇಕಾಗಿದೆ. ಎಸ್‌ಐಟಿಗೆ ನಾನು ವಿರೋಧ ಮಾಡಲ್ಲ. ಆದ್ರೆ ಎನ್‌ಐಎ ತನಿಖೆ ಬೇಕಾಗಿದೆ.
ಎಸ್‌ಐಟಿಯವರು ಕೆರೆ ಮೀನು, ಕುಂಟೆ ಮೀನು ಎಲ್ಲವನ್ನೂ ಹಿಡಿದಿದ್ದಾರೆ. ನಮಗೆ ತಿಮಿಂಗಿಲ ಬೇಕಾಗಿದೆ. ಅದಕ್ಕೋಸ್ಕರ ಧರ್ಮ ಹೋರಾಟ. ಇದು ಬಿಜೆಪಿ ಹೋರಾಟ ಅಲ್ಲ. ಹಿಂದೂಗಳ ಅಳಿವು ಉಳಿವಿನ ಪ್ರಶ್ನೆ. ಇನ್ನೊಂದು ದೇವಸ್ಥಾನ ಮುಟ್ಟಿದ್ರೆ ನಿಮ್ಮನ್ನು ಬಿಡೋದಿಲ್ಲ ಅನ್ನೋ ಎಚ್ಚರಿಕೆ ಕೊಡುವುದಕ್ಕಾಗಿ ಹೋರಾಟ ಮಾಡ್ತಿದ್ದೇವೆ. ಕಾಂಗ್ರೆಸ್‌ನವರು ಬಂದ್ರೆ ಡಯಾಸ್ ಮೇಲೆ ಕೂರಿಸುತ್ತೇವೆ. ಇದರಲ್ಲಿ ಪಕ್ಷ ಎಂಬುದಿಲ್ಲ. ನಾಟಕ ಆಡೋದ ಬೇಡ. ಹಿಂದೂಗಳ ವಿರೋಧಿಯಾಗಿ ನಾನಿರ್ತೀನಿ. ನೀನು ಮುಸಲ್ಮಾನರ ವಿರೋಧಿ ಆಗಿರು ಅಂತಾ ಡಿಕೆ ಶಿವಕುಮಾರ್‌ಗೆ ಸಿದ್ದರಾಮಯ್ಯ ಹೇಳಿಕೊಡೋದಲ್ಲ. ನಮ್ಮದು ಒಂದೇ ನಿಲುವು. ಧರ್ಮವನ್ನು ರಕ್ಷಣೆ ಮಾಡೇ ಮಾಡ್ತೀವಿ. ಹೀಗಂತ ಸಿಎಂ ಸಿದ್ದರಾಮಯ್ಯಗೆ ಅಶೋಕ್ ತಿರುಗೇಟು ಕೊಟ್ಟಿದ್ದಾರೆ.
ಇದೇ ವೇಳೆ ಮೈಸೂರಿನ ಸಿದ್ದರಾಮನಹುಂಡಿಗೆ ಸಿಎಂ ಸಿದ್ದರಾಮಯ್ಯ ಇವತ್ತು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಅವ್ರು ಬಿಜೆಪಿಗರ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿಗರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ. ರಾಜಕೀಯ ಮಾಡ್ತಿದ್ದಾರೆ ಮಾಡಲಿ. ಅದರಿಂದ ರಾಜಕೀಯ ಲಾಭ ಸಿಗುತ್ತೆ ಅಂತಾ ಅಂದುಕೊಂಡಿದ್ದಾರೆ. ಆದರೆ ಏನೂ ಸಿಗುವುದಿಲ್ಲ. ಯಾಕಂದ್ರೆ, ಧರ್ಮಸ್ಥಳದ ಬಗ್ಗೆ ಅಪಾರ ಗೌರವ ಇದೆ. ಮಂಜುನಾಥೇಶ್ವರನ ಬಗ್ಗೆಯೂ ಗೌರವ ಇದೆ. ಎಸ್‌ಐಟಿ ರಚನೆ ಆದ ಪ್ರಾರಂಭದಲ್ಲಿ ಏಕೆ ಮಾಡಲಿಲ್ಲ. ಹಲವು ದಿನಗಳ ಬಳಿಕ ಏನೂ ಸಿಗ್ತಿಲ್ಲ ಅಂತಾ ಗೊತ್ತಾದ್ಮೇಲೆ, ಧರ್ಮಸ್ಥಳ ಯಾತ್ರೆ ಮಾಡೋಕೆ ಶುರು ಮಾಡಿದ್ರು. ಇದು ಡೋಂಗಿತನ ಅಲ್ವಾ.
ಹಿಂದುತ್ವ ಗಟ್ಟಿಯಾಗುತ್ತದೆ. ಹಿಂದೂಗಳೆಲ್ಲಾ ಒಟ್ಟಾಗ್ತಾರೆ ಅಂತಾ ಅಂದುಕೊಂಡಿದ್ದಾರೆ. ನಾನು ಕೂಡ ಹಿಂದು. ಹಿಂದೂಗಳು ಅಂದ್ರೆ ರಾಜಕೀಯ ಮಾಡೋದಲ್ಲ. ಅಪಪ್ರಚಾರ ಮಾಡೋದಲ್ಲ. ಸುಳ್ಳು ಹೇಳೋದಲ್ಲ. ಮನುಷ್ಯತ್ವ ಇರಬೇಕು. ಇಲ್ಲದವರನ್ನು, ಅಮಾನವೀಯ ನಡವಳಿಕೆ ಇದ್ರೆ, ಅವರನ್ನು ಮನುಷ್ಯರಲ್ಲ ಅಂತಾ ಕರೀತಾರೆ ಅಂತಾ, ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.