ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೋಮವಾರ ರಾತ್ರಿ ತಮ್ಮ ಕಾವೇರಿ ನಿವಾಸದಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟವನ್ನು ಆಯೋಜಿಸಿದ್ದರು. ಎಲ್ಲ ಸಚಿವರ ರಿಪೋರ್ಟ್ ಕಾರ್ಡ್ ಪಕ್ಷದ ಹೈಕಮಾಂಡ್ ಬಳಿ ಇದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಾಗಾಗಿ, ಮೊದಲು ನಿಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಸೂಚ್ಯವಾಗಿ ಸಂಪುಟ ಸಹೋದ್ಯೋಗಿಗಳಿಗೆ ಹೇಳಿದ್ದಾರೆ.
ಅಲ್ಲದೆ, ಸಚಿವ ಸ್ಥಾನ ತ್ಯಾಗ ಮಾಡಬೇಕಾದ ಸಂದರ್ಭ ಬಂದಲ್ಲಿ, ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ ಎಂದೂ ಹೇಳಿದ್ದಾರೆನ್ನಲಾಗಿದೆ. 50 ಕೋಟಿ ರೂ. ಬಿಡುಗಡೆಯಾದರೂ ವಿವಿಧ ಕಾಮಗಾರಿಗಳ ಸರಿಯಾದ ಕಾರ್ಯಾದೇಶಗಳು ಆಗಿಲ್ಲ ಎಂಬ ದೂರುಗಳಿವೆ. ಶಾಸಕರು ಪದೇ ಪದೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಹಾಗಾಗಿ, ಸಚಿವರು ತಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಬೇಕು ಎಂದು ಸಚಿವರಿಗೆ ಚುರುಕು ಮುಟ್ಟಿಸಿದರು ಎನ್ನಲಾಗಿದೆ.
ಎಷ್ಟೋ ಶಾಸಕರು ತಮ್ಮನ್ನು ನೇರವಾಗಿ ಭೇಟಿಯಾಗಿ ನಿಮ್ಮ ನಡೆ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ. ಇನ್ನಾದರೂ ನಿಮ್ಮ ನಡೆ ಬದಲಾಯಿಸಿಕೊಳ್ಳಬೇಕು. ಶಾಸಕರಿಗೇ ಸ್ಪಂದಿಸದಿದ್ದರೆ ಹೇಗೆ? ಎಂದು ಔತಣಕೂಟದಲ್ಲಿ ಖಾರವಾಗಿ ಕೇಳಿದರು ಎಂದು ಮೂಲಗಳು ತಿಳಿಸಿವೆ. ಶಾಸಕರ ಯಾವುದೇ ಪತ್ರಗಳು ಬಂದರೂ ಆದ್ಯತೆ ನೀಡಬೇಕು. ಕೂಡಲೇ ಸ್ಪಂದಿಸುವ ಕೆಲಸ ಮಾಡಬೇಕು ಎಂದ ಸಿಎಂ, ಸಚಿವ ಸ್ಥಾನ ತ್ಯಾಗ ಮಾಡಬೇಕಾದ ಸಂದರ್ಭ ಬಂದಲ್ಲಿ, ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಈ ಮೊದಲೇ ಹೇಳಿದಂತೆ ಎಲ್ಲ ಸಚಿವರ ಕಾರ್ಯವೈಖರಿ ಬಗ್ಗೆ ಮೌಲ್ಯಮಾಪನ ಆಗಿದೆ ಎಂದೂ ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಪುನಾ ರಚನೆಗೆ ಆಸಕ್ತಿ ಹೊಂದಿದೆ. ಹೊಸಬರಿಗೆ ಅವಕಾಶ ನೀಡಲು ಇದು ಅನಿವಾರ್ಯವೂ ಕೂಡ. ಹೈಕಮಾಂಡ್ ಬಳಿ ಸಚಿವರ ರಿಪೋರ್ಟ್ ಕಾರ್ಡ್ ಇದ್ದು, ಅದರ ಆಧಾರದ ಮೇಲೆ ಯಾವಾಗ ಬೇಕಾದರೂ ಸೂಚನೆ ನೀಡಬಹುದು. ಹೀಗಾಗಿ ಮಾನಸಿಕವಾಗಿ ಸಿದ್ಧವಾಗಿರಿ ಎಂದು ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಆಡಳಿತದ ಜೊತೆಗೆ ಮುಂದಿನ ಬಾರಿಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪಕ್ಷ ಸಂಘಟನೆಯೂ ಮುಖ್ಯ, ಪಕ್ಷವನ್ನು ಬಲವಾಗಿ ಸಂಘಟಿಸಿ ಮುಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗಳನ್ನು ಗೆಲ್ಲಿಸಬೇಕು. ಜೊತೆಗೆ 2028ರ ಚುನಾವಣೆಗೂ ಸಿದ್ದತೆ ನಡೆಸಬೇಕೆಂದು ಸೂಚಿಸಿರುವುದಾಗಿ ತಿಳಿದುಬಂದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

