Political News: ಬಿಜೆಪಿಯವರು ಧರ್ಮಸ್ಥಳಕ್ಕೆ ರಾಜಕೀಯವಾಗಿ ಯಾತ್ರೆ ಕೈಗೊಂಡಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಧರ್ಮಸ್ಥಳ ಯಾತ್ರೆ ಮಾಡಿದ್ದಾರೆ. ಈ ಬಗ್ಗೆ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ, ಇದೆಲ್ಲ ಬಿಜೆಪಿಗರ ಡೋಂಗಿತನ ಎಂದಿದ್ದಾರೆ.

ಬಿಜೆಪಿಯವರು ಧರ್ಮಸ್ಥಳಕ್ಕೆ ರಾಜಕೀಯವಾಗಿ ಯಾತ್ರೆ ಕೈಗೊಂಡಿದ್ದಾರೆ. ಅವರಿಗೆ ರಾಜಕೀಯ ಲಾಭ ಸಿಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಅದು ಸಿಗುವುದಿಲ್ಲ. ಏಕೆಂದರೆ ಧರ್ಮಸ್ಥಳದ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಎಸ್ಐಟಿ ರಚಿಸಿದಾಗ ವಿರೋಧ ಮಾಡದೆ ಇದ್ದವರು, ನಂತರದಲ್ಲಿ ಏನೂ ಸಿಗುವುದಿಲ್ಲ ಎಂದು ತಿಳಿದು ವಿರೋಧಿಸುತ್ತಿದ್ದಾರೆ. ಇದು ಡೋಂಗಿತನ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರು ಹಿಂದುತ್ವ ಗಟ್ಟಿಯಾಗುತ್ತದೆ, ಹಿಂದೂಗಳೆಲ್ಲ ಒಟ್ಟಾಗುತ್ತಾರೆ ಎಂದು ಹೇಳುತ್ತಾರೆ. ನಾನೂ ಕೂಡ ಹಿಂದೂವೇ. ನಮ್ಮೂರಿನಲ್ಲಿ ನಾವು ರಾಮಮಂದಿರ ಕಟ್ಟಿಲ್ಲವೇ?. ಹಿಂದೂಗಳೆಂದರೆ ರಾಜಕೀಯ ಅಪಪ್ರಚಾರ ಮಾಡುವುದಲ್ಲ, ಸುಳ್ಳು ಹೇಳುವುದಲ್ಲ. ಯಾರೇ ಆದರೂ ಮನುಷ್ಯತ್ವ ಎಂಬುದು ಇರಬೇಕು. ಬಿಜೆಪಿ ದಸರಾ ಹಬ್ಬದಲ್ಲೂ ರಾಜಕಾರಣ ಮಾಡುತ್ತಿದೆ. ಸುಳ್ಳು ಹೇಳುವುದು ಬಿಟ್ಟು ಬೇರೇನಾದರೂ ಅವರಿಗೆ ಬರುತ್ತದೆಯೇ? ಎಂದು ಸಿಎಂ ಪ್ರಶ್ನಿಸಿದ್ದಾರೆ.

ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ದೊರಕಿದ್ದು, ಎಷ್ಟು ಜನಕ್ಕೆ ಈ ಪ್ರಶಸ್ತಿ ಲಭಿಸಿದೆ?. ಅವರನ್ನು ಗೌರವಿಸುವ ಉದ್ದೇಶದಿಂದ ದಸರಾ ಉದ್ಘಾಟನೆಗೆ ಅವಕಾಶ ನೀಡಲಾಗಿದೆ. ದಸರಾ ಮೇಲೆ ರಾಜಕಾರಣ ಯಾವುದೇ ಪರಿಣಾಮ ಬೀರುವುದಿಲ್ಲ. ದಸರಾ ಹಬ್ಬ ನಾಡ ಹಬ್ಬವಲ್ಲವೇ? ನಾಡಹಬ್ಬ ಎಂದರೆ ಎಲ್ಲರೂ ಸೇರಿ ಮಾಡುವುದು. ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧರು ಸೇರಿ ಆಚರಿಸುವ ಹಬ್ಬ. ವಿಷಯ ಇರುವುದು ಚಾಮುಂಡಿ ಬೆಟ್ಟದ್ದಲ್ಲ, ದಸರಾ ಹಬ್ಬದ್ದು ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.

About The Author