ಕನ್ನಡ ಚಿತ್ರರಂಗದ ಹಿರಿಯ ನಟಿಯರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ವಿಶೇಷ ಮನವಿ ಸಲ್ಲಿಸಿದ್ದಾರೆ. ನಟಿಯರಾದ ಜಯಮಾಲ, ಶೃತಿ ಮತ್ತು ಮಾಳವಿಕಾ, ಡಿಕೆಶಿಯವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅವರ ಬೇಡಿಕೆಗಳ ಒತ್ತಾಯವನ್ನು ಒಳಗೊಂಡಂತೆ ಮಾತುಕತೆ ನಡೆಸಿದರು.
ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ 75ನೇ ಹುಟ್ಟು ಹಬ್ಬ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಮನವಿ ಸಲ್ಲಿಸಲಾಗಿತ್ತು. ಇಂದು ಡಿಸಿಎಂರನ್ನು ಭೇಟಿಯಾಗಿ ಕೂಡ ಈ ಬಗ್ಗೆ ಅವರ ಸಹಕಾರ ಕೇಳಲಾಯಿತು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಜಯಮಾಲಾ, ಡಿಕೆಶಿ ಅವರು ಚಿತ್ರರಂಗದವರೆ ಆಗಿದ್ದಾರೆ. ಹಾಗಾಗಿ ದಿವಂಗತ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ವಿಷಯಕ್ಕೆ ಸಂಬಂಧ ಪಟ್ಟಂತೆ ಬಹಳ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಜೊತೆಗೆ, ಸರೋಜಾದೇವಿ ಅವರು ವಾಸಿಸುತ್ತಿದ್ದ ಮಲ್ಲೇಶ್ವರಂ 11ನೇ ಕ್ರಾಸ್ ರಸ್ತೆಗೆ ಅವರ ಹೆಸರನ್ನೇ ನಾಮಕರಣ ಮಾಡಬೇಕೆಂಬ ಬೇಡಿಕೆಯನ್ನು ಸಹ ಡಿಸಿಎಂಗಳ ಬಳಿ ಪ್ರಸ್ತಾಪಿಸಲಾಗಿದೆ. ಈ ಕುರಿತು ಸಹಕಾರ ನೀಡುವುದಾಗಿ ಡಿಕೆಶಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ