ಜಿಎಸ್‌ಟಿ ಸರಳೀಕರಣದಿಂದ ರಾಜ್ಯಕ್ಕೆ 15,000 ರಿಂದ 20,000 ಕೋಟಿ ರೂ. ನಷ್ಟ ಸಂಭವಿಸುವುದಾಗಿದೆ. ಆದರೂ ಜನಸಾಮಾನ್ಯರ ಮೇಲಿನ ಆರ್ಥಿಕ ಭಾರ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಈ ಲಾಭವನ್ನು ಬಳಕೆದಾರರಿಗೆ ತಲುಪಿಸದೇ ವ್ಯಾಪಾರಿಗಳು ಮತ್ತು ಉದ್ಯಮಿಗಳು ದುರುಪಯೋಗ ಮಾಡಿಕೊಳ್ಳದಂತೆ ತಡೆಯಬೇಕೆಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಸಿದ್ದರಾಮಯ್ಯ ಅವರು, ಜಿಎಸ್‌ಟಿ ಸರಳೀಕರಣವು ಮೋದಿ ಸರ್ಕಾರದ ಹೊಸ ಆವಿಷ್ಕಾರವಲ್ಲ ಎಂದಿದ್ದಾರೆ. 2017ರಲ್ಲಿ ಎನ್‌ಡಿಎ ಸರ್ಕಾರ ತುರ್ತುವಾಗಿ ದೋಷಪೂರ್ಣ ಜಿಎಸ್‌ಟಿ ಜಾರಿಗೆ ತಂದಾಗಲೇ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳು ಸುಧಾರಣೆಗಾಗಿ ಒತ್ತಾಯಿಸಿದ್ದವು.
ಆ ಸಮಯದಲ್ಲಿ ಜಿಎಸ್‌ಟಿಯನ್ನು ಗಬ್ಬರ್ ಸಿಂಗ್ ತೆರಿಗೆ ಎಂದು ಕರೆಯಲಾಗಿದ್ದು, ದೇಶದ ಸಣ್ಣ ವ್ಯಾಪಾರಿಗಳ ಹಿತಾಸಕ್ತಿಗೆ ಭಾರಿ ಹೊಡೆತ ನೀಡಿತೆಂದು ಸಾಕ್ಷ್ಯಾಧಾರಗಳೊಂದಿಗೆ ವಿರೋಧ ಪಕ್ಷವನ್ನೂ ತೋರಿಸಿತ್ತು. ಕೊನೆಗೂ ಮೋದಿ ಈಗ ಎಚ್ಚೆತ್ತುಕೊಂಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಜಿಎಸ್‌ಟಿ ವ್ಯವಸ್ಥೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದ್ದು, ರಾಜ್ಯಗಳ ಒತ್ತಾಯದಿಂದಲೇ ಸರಳೀಕರಣದ ನಿರ್ಧಾರಕ್ಕೆ ಕೇಂದ್ರ ಬಲವಂತವಾಗಿ ಮುಂದಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜಿಎಸ್‌ಟಿ ಸುಧಾರಣೆಯ ನಿಜವಾದ ಲಾಭ ಜನತೆಗೆ ತಲುಪುವಂತೆ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ತೆರಿಗೆ–ಸುಂಕ ಮಂಡಳಿಯದ್ದಾಗಿದೆ. ಈ ಅವಕಾಶವನ್ನು ವ್ಯಾಪಾರಿಗಳು, ಉದ್ಯಮಿಗಳು ತಮ್ಮ ಲಾಭಾಂಶ ಹೆಚ್ಚಿಸಲು ದುರುಪಯೋಗ ಮಾಡದಂತೆ ಕಡ್ಡಾಯವಾಗಿ ತಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ, ಈಗಲೂ ಕೇಂದ್ರ ಸರ್ಕಾರ ಸಂಗ್ರಹಿಸುತ್ತಿರುವ ಜಿಎಸ್‌ಟಿ ಪರಿಹಾರ ಸುಂಕದಲ್ಲಿ ರಾಜ್ಯಗಳಿಗೆ ನ್ಯಾಯಬದ್ಧ ಪಾಲು ನೀಡಬೇಕು ಎಂದೂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

