ವಿಧಾನ ಪರಿಷತ್ತಿನ 4 ಸ್ಥಾನಗಳ ನಾಮ ನಿರ್ದೇಶನದ ಪಟ್ಟಿಗೆ, ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಡಾ. ಆರತಿ ಕೃಷ್ಣ, ಎಫ್.ಹೆಚ್. ಜಕ್ಕಪ್ಪನವರ್, ಮೈಸೂರಿನ ಪತ್ರಕರ್ತ ಶಿವಕುಮಾರ್ ಕೆ. ಅವರ ಹೆಸರುಗಳಿದ್ದ ಪಟ್ಟಿಯನ್ನು, ರಾಜ್ಯ ಸರ್ಕಾರ ಕಳಿಸಿಕೊಟ್ಟಿತ್ತು. ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಕೃತ
ಮುದ್ರೆ ಒತ್ತಿದ್ದಾರೆ.
ಇನ್ನು, ರಮೇಶ್ ಬಾಬು ಅವರ ಅವಧಿ 2026ರ ಜುಲೈ 21ರವರೆಗೆ ಇರಲಿದೆ.
ಉಳಿದ ಮೂವರು, 6 ವರ್ಷಗಳ ಅವಧಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜಕ್ಕಪ್ಪ ಮತ್ತು ಆರತಿ ಕೃಷ್ಣ ಕಾಂಗ್ರೆಸ್ ಪಕ್ಷದ ಹೈಕಮ್ಯಾಂಡ್ ಕೋಟಾದ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದರೆ, ಸಿಎಂ ಕೋಟಾದಿಂದ ರಮೇಶ್ ಬಾಬು ಮತ್ತು ಪತ್ರಕರ್ತ ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಮೊದಲ ಪಟ್ಟಿಯಲ್ಲಿ ರಮೇಶ್ ಬಾಬು, ಡಿ.ಜಿ. ಸಾಗರ್, ದಿನೇಶ್ ಅಮೀನ್ ಮಟ್ಟು, ಆರತಿ ಕೃಷ್ಣ ಹೆಸರುಗಳು ಇದ್ದವು. ಸಿಎಂ ಸಿದ್ದರಾಮಯ್ಯನವರ ಪಟ್ಟಿಗೆ ಹೈಕಮಾಂಡ್ ಸಹ, ಈ ಮೊದಲು ಅನುಮೋದಿಸಿತ್ತು. ಈ ಪೈಕಿ ಸಾಗರ್ ಮತ್ತು ಅಮೀನ್ ಮಟ್ಟು ಪ್ರಸ್ತಾಪಕ್ಕೆ, ಭಾರೀ ಆಕ್ಷೇಪ ವ್ಯಕ್ತವಾಗಿದ್ದವು. ಅಲ್ಲದೇ ಅಮೀನ್ ಮಟ್ಟು ವಿರುದ್ಧ ರಾಜ್ಯಪಾಲರಿಗೆ ದೂರನ್ನೂ ನೀಡಲಾಗಿತ್ತು. ಬಳಿಕ ಸರ್ವಸಮ್ಮತ ಹೆಸರು ನೀಡುವಂತೆ ಸಿಎಂ, ಡಿಸಿಎಂಗೆ, ಹೈಕಮಾಂಡ್ ಸೂಚಿಸಿತ್ತು. ಈ ಹಿನ್ನೆಲೆ ಅಂತಿಮವಾಗಿ ಪಟ್ಟಿಯಿಂದ ಅಮೀನ್ ಮಟ್ಟು ಹಾಗೂ ಡಿ.ಜಿ. ಸಾಗರ್ ಹೆಸರುಗಳನ್ನು ಕೈಬಿಟ್ಟು, ಪತ್ರಕರ್ತ ಶಿವಕುಮಾರ್ ಮತ್ತು ಜಕ್ಕಪ್ಪನವರ್ ಹಸರು ಸೇರ್ಪಡೆ ಮಾಡಲಾಗಿತ್ತು.

