Monday, October 6, 2025

Latest Posts

ಶುರುವಾಯ್ತು ನಂಬರ್ ಗೇಮ್ : 35 ಸಂಸದರೇ ನಿರ್ಣಾಯಕ !

- Advertisement -

ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಂಬರ್ ಗೇಮ್ ಜೋರಾಗಿದೆ. ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೋ? ಅಥವಾ ಇಂಡಿಯಾ ಮೈತ್ರಿಕೂಟದ ಬಿ.ಸುದರ್ಶನ್ ರೆಡ್ಡಿ ಫೈಟ್ ಕೊಡ್ತಾರಾ ಕಾದು ನೋಡಬೇಕು. ಇಡೀ ದೇಶದ ಜನತೆ ಕುತೂಹಲದಿಂದ ಕಾಯುತ್ತಿರುವ ಉಪರಾಷ್ಟ್ರಪತಿ ಚುನಾವಣೆಯ ಫಲಿತಾಂಶಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

ಜಗದೀಪ್ ಧನಕರ್ ಅವರು ಹಠಾತ್ ರಾಜೀನಾಮೆ ನೀಡಿದ ನಂತರ ಈ ಚುನಾವಣೆ ನಡೆಯುತ್ತಿದೆ. ಸಾಮಾನ್ಯವಾಗಿ ಆಯಾ ಪಕ್ಷಗಳು ನೀಡುವ ವಿಪ್ ಅನ್ನು ಉಲ್ಲಂಘಿಸುವುದು ವಿರಳ. ಆದರೆ, ಈ ಬಾರಿ ಭಾಷಾ ಭಾವನೆ ಮತ್ತು ಪ್ರಾದೇಶಿಕತೆ, ಪಕ್ಷ ರಾಜಕೀಯಕ್ಕಿಂತಲೂ ದೊಡ್ಡದಾಗಬಹುದು ಎನ್ನುವ ಅಂದಾಜು ಇದೆ. ಅದಕ್ಕಾಗಿಯೇ ಈ ಚುನಾವಣೆಯ ಕದನ ಕುತೂಹಲ ಹೆಚ್ಚಿಸಿದೆ.

ತಮಿಳು ಮತದಾರರ ಮನಸ್ಸು ಒಂದೆಡೆ, ತೆಲುಗು ಮತದಾರರ ಮನಸ್ಸು ಇನ್ನೊಂದೆಡೆ. ಪ್ರಾದೇಶಿಕ ಪಾರ್ಟಿಗಳು ಯಾವ ಒಕ್ಕೂಟದ ಜೊತೆಗೂ ಗುರುತಿಸಿಕೊಂಡಿದ್ದರೂ, ತಮಿಳು ಅಥವಾ ತೆಲುಗು ಎನ್ನುವ ಅಭಿಮಾನವೇ ಕೊನೆಯ ಕ್ಷಣದಲ್ಲಿ ಬದಲಾವಣೆ ತರಬಹುದೆಂಬ ಅಂಜಿಕೆ ಇದೆ. ಈ ವಿಷಯವೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬ್ಲಡ್ ಪ್ರೆಷರ್ ಹೆಚ್ಚಿಸಲು ಕಾರಣವಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ.

ಇನ್ನು, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಮುಖ್ಯ ನಾಯಕರ ನಡೆ ಕೂಡ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಗೆ ಸೇರಲು ಒಂದು ಹೆಜ್ಜೆ ಮುಂದೆ ನಿಂತಿದ್ದ ಕೆ. ಚಂದ್ರಶೇಖರ ರಾವ್ –ಚುನಾವಣೆಯಲ್ಲಿ ಭಾಗವಹಿಸುವುದೇ ಇಲ್ಲ ಎಂದು ಘೋಷಿಸಿದ್ದಾರೆ.

ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಮತ್ತು ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ ಇವರ ನಡೆಗೆ ಈಗ ದೇಶ ಕಣ್ಣು ಹಾಯಿಸಿದೆ. ಏಕೆಂದರೆ ಇವರಿಗಿರುವ ಸಂಸದರ ಸಂಖ್ಯೆಯೇ ನಿರ್ಣಾಯಕ. ಮೇಲ್ನೋಟಕ್ಕೆ ಬಿಜೆಪಿ ಅಭ್ಯರ್ಥಿ ರಾಧಾಕೃಷ್ಣನ್ ಅವರಿಗೆ ಗೆಲುವು ಸುಲಭವೆಂದು ತೋರುತ್ತಿದೆ. ಆದರೂ, ಪ್ರಾದೇಶಿಕತೆ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದು ಕುತೂಹಲ. ಕೆಲವೇ ಗಂಟೆಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss